ತಮಿಳು ನಟಿ ರಮ್ಯಾಕೃಷ್ಣ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ಕನ್ನಡದಲ್ಲೂ ಕೆಲ ಸಿನಿಮಾಗಳಲ್ಲಿ ಆಕೆ ನಟಿಸಿ ಮೋಡಿ ಮಾಡಿದ್ದಾರೆ. ತಮಿಳು, ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ರಮ್ಯಾಕೃಷ್ಣ ನಟಿಸಿದ್ದಾರೆ. ಇವತ್ತಿಗೂ ಪೋಷಕ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಆಕೆ ಮಾಡಿರುವ 'ಅಮ್ಮೋರು' ಚಿತ್ರದ ಟೈಟಲ್ ರೋಲ್, 'ಪಡೆಯಪ್ಪ' ಚಿತ್ರದ ನೀಲಾಂಬರಿ ಹಾಗೂ 'ಬಾಹುಬಲಿ' ಚಿತ್ರದ ಶಿವಗಾಮಿ ಪಾತ್ರಗಳನ್ನು ಪ್ರೇಕ್ಷಕರು ಮರೆಯೋಕೆ ಸಾಧ್ಯವಿಲ್ಲ.
ನಾಯಕಿಯಾಗಿ ಎಷ್ಟೇ ಸಿನಿಮಾಗಳಲ್ಲಿ ನಟಿಸಿದ್ದರೂ ಈ ಮೂರು ಐಕಾನಿಕ್ ಪಾತ್ರಗಳಲ್ಲೇ ರಮ್ಯಾಕೃಷ್ಣ ಇವತ್ತಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಆದರೆ ಮೊದಲಿಗೆ ಈ ಪಾತ್ರಗಳಲ್ಲಿ ಆಕೆ ನಟಿಸೋಕೆ ಹಿಂದೇಟು ಹಾಕಿದ್ದರಂತೆ. 'ಪಡೆಯಪ್ಪ' ಚಿತ್ರದಲ್ಲಿ ನೆಗೆಟಿವ್ ರೋಲ್ ಆಗಿದ್ದರಿಂದ ನಟಿಸಲ್ಲ ಎಂದು ಹೇಳಿದ್ದರಂತೆ. ಇನ್ನು ಧಾರಾವಾಹಿ ನಿರ್ಮಾಣದಲ್ಲಿ ಬ್ಯುಸಿ ಇದ್ದಿದ್ದರಿಂದ ಶಿವಗಾಮಿ ಪಾತ್ರ ಮಾಡೋಕೆ ಸಾಧ್ಯವಿಲ್ಲ ಎಂದೇ ಹೇಳಿಬಿಟ್ಟಿದ್ದರಂತೆ. ಬಳಿಕ ಅವರನ್ನು ಒಪ್ಪಿಸಲಾಗಿತ್ತು. ಕೊನೆಗೆ ಅದೇ ಪಾತ್ರಗಳು ಆಕೆಗೆ ದೊಡ್ಡ ಹೆಸರು ತಂದುಕೊಟ್ಟವು.
90ರ ದಶಕದಲ್ಲಿ ರಮ್ಯಾಕೃಷ್ಣ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ನಮ್ಮ ಕಾಲದಲ್ಲಿ ನಟಿಯರ ನಡುವೆ ಭಾರೀ ಪೈಪೋಟಿ ಇತ್ತು. ಯಾರಿಗಾದರೂ ಒಳ್ಳೆ ಪಾತ್ರ ಸಿಕ್ಕಿ ಸಿನ್ಮಾ ಹಿಟ್ ಆಗಿಬಿಟ್ಟರೆ ಅಸೂಯೆ ಆಗ್ತಿತ್ತು. ಆದ್ರೆ, ಮೇಲ್ನೋಟಕ್ಕೆ ಏನೂ ಇಲ್ಲದಂತೆ ಎದುರಿಗೆ ಸಿಕ್ಕಾಗ ಚೆನ್ನಾಗಿ ನಗುನಗುತ್ತಾ ಮಾತನಾಡುತಿದ್ದೆವು ಎಂದು ರಮ್ಯಾಕೃಷ್ಣ ನಕ್ಕಿದ್ದಾರೆ. Raw Talks With VK ಪಾಡ್ಕಾಸ್ಟ್ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ಚಿತ್ರರಂಗ ಪ್ರವೇಶಿಸಿದ ಬಳಿಕ ಬಂದ ಎಲ್ಲಾ ನಟಿಯರ ಜೊತೆಗೂ ಇಂತಹ ಪೈಪೋಟಿ ಇತ್ತು ಎಂದು ಒಪ್ಪಿಕೊಂಡಿದ್ದಾರೆ.
ಸೌಂದರ್ಯ ಜೊತೆಗೂ ಪೈಪೋಟಿ ಇತ್ತು. ಆಕೆಯ ಜೊತೆಗೆ ನಾನು ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೆ. ಒಂದು ಹಿಟ್ ಸಿಕ್ರೆ, ಒಳ್ಳೆ ರೋಲ್ ಬಂದುಬಿಟ್ರೆ, ಆ ಕ್ಲ್ಯಾಶ್ ಬರ್ತಿತ್ತು ಎಂದು ರಮ್ಯಾಕೃಷ್ಣ ನೆನಪಿಸಿಕೊಂಡಿದ್ದಾರೆ. ಇನ್ನು ಐಕಾನಿಕ್ ಪಾತ್ರಗಳನ್ನು ಅದು ಐಕಾನಿಕ್ ಆಗುತ್ತೆ ಎಂದು ನಾನು ಮಾಡ್ಲಿಲ್ಲ. ಯಾರು ಆ ರೀತಿ ಅಂದುಕೊಂಡು ಮಾಡೋಕ್ಕಾಗಲ್ಲ. ಆಗಲ್ಲ. ಮಾಡಿದ್ರೆ ಅದು ಐಕಾನಿಕ್ ಆಗ ಲ್ಲ.. ಸೌಂದರ್ಯ ಯಶಸ್ಸು ನಿಧಾನಕ್ಕೆ ಶುರುವಾಗಿ ಒಳ್ಳೆಯ ಪಾತ್ರಗಳಿಂದ ಬಹಳ ಬೇಗ ಮೇಲಕ್ಕೆ ಏರಿಬಿಟ್ಲು.. ಸೌಂದರ್ಯಗೆ ಎದುರು ನಾನು ನೆಗೆಟಿವ್ ಪಾತ್ರ(ಪಡೆಯಪ್ಪ ಚಿತ್ರದ ನೀಲಾಂಬರಿ) ಮಾಡಬೇಕಾ? ಅಂತ ನನ್ನ ಮನಸ್ಸಿನಲ್ಲಿ ಅನ್ನಿಸುತ್ತಿತ್ತು" ಎಂದು ರಮ್ಯಾಕೃಷ್ಣ ಹೇಳಿರುವುದು ವೈರಲ್ ಆಗ್ತಿದೆ.
ಮಾತು ಮುಂದುವರೆಸಿರುವ ರಮ್ಯಾಕೃಷ್ಣ "ನನ್ನ ಜೊತೆ ಸೌಂದರ್ಯ 'ಅಮ್ಮೋರು' ಚಿತ್ರದಲ್ಲಿ ನಟಿಸೋಕೆ ಆರಂಭಿಸಿದವಳು.. ನನ್ನ ಕಣ್ಣಮುಂದೆ ಅವಳು ಚಿತ್ರರಂಗದಲ್ಲಿ ಬೆಳೆದಿದ್ದನ್ನು ನೋಡಿದ್ದೆ.. ನೆಗೆಟಿವ್ ಪಾತ್ರ ಅನ್ನೋದು ಕೊನೆಗೆ ಯಾವುದೇ ಆಯ್ಕೆ ಇಲ್ಲದೇ ಒಪ್ಪಿಕೊಳ್ಳುವಂಥದ್ದು. ಅದು ಎಷ್ಟೇ ಒಳ್ಳೆ ಪಾತ್ರ ಆಗಿದ್ರು, ನಾಯಕ-ನಾಯಕಿ ಬಳಿಕ ಕೊನೆಗೆ ಬರುವಂಥದ್ದು. ಹಾಗಾಗಿ ನೀಲಾಂಬರಿ ಪಾತ್ರ ಮಾಡಲು ಆರಂಭದಲ್ಲಿ ಹಿಂಜರಿದೆ ಎಂದು ರಮ್ಯಾಕೃಷ್ಣ ವಿವರಿಸಿದ್ದಾರೆ.