ರಾಕಿಂಗ್ ಸ್ಟಾರ್ ಅಭಿಮಾನಿಗಳು ನಿಜಕ್ಕೂ ಬೇಸರದಲ್ಲಿದ್ದಾರೆ. 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ನಿರೀಕ್ಷಿಸಿದ್ದ 'ಟಾಕ್ಸಿಕ್' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಸೋತಿದೆ. ಯಶ್ ನಟನೆ ಹಾಗೂ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕರೂ ಸಂಪೂರ್ಣವಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿಲ್ಲ. ರಾಯನ ಕನಸು ನನಸಾಗಲಿಲ್ಲ. ಇದೆಲ್ಲದರ ನಡುವೆ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

'ಟಾಕ್ಸಿಕ್' ಬಳಿಕ ಯಶ್ ನಟನೆಯ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಬೇಕಿದೆ. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಮೊದಲ ಸಾಂಗ್ ಹೊರಬಂದು ಸದ್ದು ಮಾಡ್ತಿದೆ. ಅಕ್ಟೋಬರ್ ಕೊನೆ ವಾರದಲ್ಲಿ ಈ ಪೌರಾಣಿಕ ಸಿನಿಮಾ ತೆರೆಗೆ ಬರಲಿದೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ದಶಕಂಠ ರಾವಣನಾಗಿ ತೆರೆಮೇಲೆ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ.

ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಚಿತ್ರದಲ್ಲಿ ನಟಿಸಿದ್ದಾರೆ. ರಾಮನಾಗಿ ರಣ್‌ಬೀರ್ ಪಾತ್ರ ಪರಿಚಯದ ವಿಶೇಷ ಟೀಸರ್ ಬಿಡುಗಡೆ ಆಗಿತ್ತು. ಅದೇ ರೀತಿ ರಾವಣನಾಗಿ ಯಶ್ ಆರ್ಭಟ ತೋರಿಸುವ ಟೀಸರ್ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಗಣೇಶ ಹಬ್ಬದ ಸಂಭ್ರಮದಲ್ಲಿ 'ಜೈ ಜೈ ರಾಮ್' ಹಾಡು ಬಿಡುಗಡೆ ಆಗಿತ್ತು. ಶೀಘ್ರದಲ್ಲೇ ಹೊಸ ಟೀಸರ್ ಬಿಟ್ಟು ಯಶ್ ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗ್ತಿದೆ.

'ಟಾಕ್ಸಿಕ್' ಸಿನಿಮಾ ಗೆದ್ದಿದ್ದರೆ 'ರಾಮಾಯಣ' ಚಿತ್ರಕ್ಕೂ ಆನೆ ಬಲ ಬರುತ್ತಿತ್ತು. ಈಗಾಗಲೇ ಟ್ರೈಲರ್‌ನಲ್ಲಿ ವಿಎಫ್‌ಎಕ್ಸ್ ನೋಡಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಸಿನಿಮಾ ಬಂದಮೇಲೆ ಏನೆಲ್ಲಾ ಆಗಬಹುದು ಎನ್ನುವ ಚರ್ಚೆ ಶುರುವಾಗಿದೆ. ಇಂತಹ ಹೊತ್ತಿನಲ್ಲೇ ರಾವಣನಾಗಿ ಯಶ್ ಟೀಸರ್ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ರಾವಣನನ್ನು ತೋರಿಸುವ ಟೀಸರ್ ಬರುತ್ತದೆ ಎಂದು ನಿತೇಶ್ ತಿವಾರಿ ಹಿಂದೆ ಹೇಳಿದ್ದರು. ಅದಕ್ಕೆ ಈಗ ಸಮಯ ಹತ್ತಿರ ಬರ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಮತ್ತೊಂದು ಟ್ರೈಲರ್ ಬಂದರೂ ಅಚ್ಚರಿಪಡಬೇಕಿಲ್ಲ.

ಟ್ರೈಲರ್ ನೋಡಿ ಸಾಕಷ್ಟು ವಿಚಾರಗಳ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಸದ್ಯ ಬಂದಿರುವ ಹಾಡಿನಲ್ಲಿ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದೆ ಚಿತ್ರತಂಡ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದ್ದು ತೆರೆಮೇಲೆ ಅದ್ಭುತವಾಗಿ ಸಿನಿಮಾ ಕಟ್ಟಿಕೊಡಲು ನಿತೇಶ್ ಹಾಗೂ ತಂಡ ಮುಂದಾಗಿದೆ.