ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಮೊದಲ ಭಾಗ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 5ರಂದು ಸಿನಿಮಾ ತೆರೆಗೆ ತರುತ್ತೇವೆ ಎಂದು ಚಿತ್ರತಂಡ ಖಚಿತಪಡಿಸಿದೆ. ದಸರಾ ಹಬ್ಬದ ದಿನವೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ.

'ರಾಮಾಯಣ' ಕಾವ್ಯವನ್ನು ಎರಡು ಭಾಗಗಳಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ನಮ್ಮ ಕಥೆಯನ್ನು ಜಗತ್ತಿಗೆ ಹೇಳುವ ಸಾಹಸ ಮಾಡಲಾಗ್ತಿದೆ. 'ಟಾಕ್ಸಿಕ್' ರೀತಿಯಲ್ಲೇ ಸಾಲು ಸಾಲು ರಜೆಗಳಿರುವ ಸಮಯದಲ್ಲಿ ಸಿನಿಮಾ ತೆರೆಗೆ ತರಲಾಗ್ತಿದೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈವರೆಗೆ ಬಂದ 'ರಾಮಾಯಣ' ಚಿತ್ರದ ಟೀಸರ್, ಪೋಸ್ಟರ್ ಎಲ್ಲದ್ದಕ್ಕೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದೇ ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಯಶ್ ನಿರ್ಮಿಸಿ ನಟಿಸಿದ 'ಟಾಕ್ಸಿಕ್' ಸಿನಿಮಾ ಹೈಪ್ ಕ್ರಿಯೇಟ್ ಮಾಡಿದ್ದು ಅಂತಿಮವಾಗಿ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ಗೊತ್ತೇಯಿದೆ. 'ರಾಮಾಯಣ' ಚಿತ್ರದ ವಿಚಾರದಲ್ಲೂ ಕೆಲವರಿಗೆ ಇದೇ ಆತಂಕ ಶುರುವಾಗಿದೆ. ಸ್ಯಾಂಪಲ್ಸ್ ನೋಡಿ ಎದುರಿಸಿದ ಟೀಕೆಗಳಿಂದ ಚಿತ್ರತಂಡ ಎಚ್ಚೆತ್ತುಕೊಂಡು ಒಂದಷ್ಟು ಬದಲಾವಣೆಗಳನ್ನು ಮಾಡಿ ಚಿತ್ರವನ್ನು ತೆರೆಗೆ ತರಲಾಗ್ತಿದೆ. ಆದರೆ ಸದ್ಯ ಅನಾವರಣವಾಗಿರುವ ಪೋಸ್ಟರ್ ನಿರಾಸೆ ಮೂಡಿಸಿದೆ.

ಹಾಲಿವುಡ್ ರೇಂಜ್ ಸಿನಿಮಾ, ಗ್ಲೋಬಲ್ ಮಟ್ಟದಲ್ಲಿ ಬಿಡುಗಡೆ ಮಾಡ್ತೀವಿ ಎನ್ನುತ್ತಿದ್ದಾರೆ. ಆದರೆ ಹೊಸ ಪೋಸ್ಟರ್ ಮಾತ್ರ ಫ್ಯಾನ್ ಮೇಡ್ ಪೋಸ್ಟ್‌ ರೀತಿ ಭಾಸವಾಗ್ತಿದೆ. ಹಾಲಿವುಡ್ ಗಾಡ್ಜಿಲ್ಲಾ ಸರಣಿಯ ಹೊಸ ಸಿನಿಮಾ ಎದುರು 'ರಾಮಾಯಣ' ಸಿನಿಮಾ ತೆರೆಗೆ ಬರ್ತಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್ ಇರಬೇಕಿತ್ತು. ಈಗಾಗಲೇ ಕೆಲವರು ಟ್ರೈಲರ್, ಟೀಸರ್ ನೋಡಿ ಟೀಕಿಸಲು ಆರಂಭಿಸಿದ್ದಾರೆ. ಇನ್ನು ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

'ರಾಮಾಯಣ' ಕಥೆ ಎಲ್ಲರಿಗೂ ಗೊತ್ತೇಯಿದೆ. ಹಾಗಾಗಿ ಕಥೆ, ಚಿತ್ರಕಥೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅದನ್ನು ಹೇಗೆ ತೆರೆಗೆ ತರ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರ ಎದುರಿಸಿದ ಟೀಕೆಗಳು ಗೊತ್ತೇಯಿದೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತೆ ಚಿತ್ರವನ್ನು ತೆರೆಗೆ ತಂದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಈ ವಿಚಾರದಲ್ಲಿ ಚಿತ್ರತಂಡ ಬಹಳ ಎಚ್ಚರಿಕೆಯಿಂದ ಇರಬೇಕು.