ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ'- 1 ಸಿನಿಮಾ ಬಿಡುಗಡೆಗೆ 20 ದಿನ ಬಾಕಿಯಿದೆ. ಸದ್ಯ ಚಿತ್ರದ ಪ್ರಚಾರ ಆರಂಭವಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಚಿತ್ರದ ಹೊಸ ಟ್ರೈಲರ್ ಹಾಗೂ 7 ನಿಮಿಷಗಳ ಮೇಕಿಂಗ್ ವೀಡಿಯೋ ಅನಾವರಣವಾಗಿದೆ. ಹೊಸ ಟ್ರೈಲರ್ ನೋಡುಗರ ಹುಬ್ಬೇರಿಸಿದೆ.
ವಿವಿಧ ಭಾಷೆಗಳಿಗೆ 'ರಾಮಾಯಣ' ಸಿನಿಮಾ ಡಬ್ ಆಗಿ ಬರ್ತಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸಿರುವುದು ಗೊತ್ತೇಯಿದೆ. ದೀಪಾವಳಿ ಸಂಭ್ರಮದಲ್ಲಿ ನವೆಂಬರ್ 5ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಸೋನಿ ಪಿಕ್ಚರ್ಸ್ ಸಂಸ್ಥೆ ವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಪೌರಾಣಿಕ ಸಿನಿಮಾ ನಿರ್ಮಾಣವಾಗಿದೆ. ಸದ್ಯ ಕನ್ನಡ, ಇಂಗ್ಲೀಷ್ ಸೇರಿ 6 ಭಾಷೆಗಳಲ್ಲಿ 'ರಾಮಾಯಣ' ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿ ಸದ್ದು ಮಾಡ್ತಿದೆ.
"ಯುಗಯುಗಗಳಿಂದ ನಡೆಯುತ್ತಿದ್ದ ದೇವಾಸುರರ ಯುದ್ಧದಲ್ಲಿ ದೇವತೆಗಳು ವಿಜಯ ಸಾಧಿಸಿದ್ದರು. ಸೃಷ್ಟಿಯಲ್ಲಿ ಶಾಂತಿ ನೆಲೆಸಿತ್ತು. ಅಶಾಂತರಾಗಿದ್ದ ಅಸುರರಲ್ಲಿ ಹುಟ್ಟಿತ್ತೊಂದು ಜ್ವಾಲೆ" ಎನ್ನುವ ರವಿಶಂಕರ್ ಖಡಕ್ ವಾಯ್ಸ್ ಹಿನ್ನೆಲೆಯಲ್ಲಿ ಟ್ರೈಲರ್ ಆರಂಭವಾಗುತ್ತದೆ. ನಿಧಾನವಾಗಿ ರಾವಣ ತಪಸ್ಸು ಮಾಡುವುದು, ದೇವತೆಗಳ ಮೇಲೆ ಅಟ್ಟಹಾಸ ಮೆರೆಯುವುದನ್ನು ನೋಡಬಹುದು.. ಮೂರು ಲೋಕಗಳಲ್ಲಿ ಇನ್ನು ನನ್ನದೇ ಸಾಮ್ರಾಜ್ಯ ಎಂದು ರಾವಣ ಮೆರೆಯುತ್ತಿದ್ದಾಗಲೇ "ಆಗ ಸೃಷ್ಟಿಯ ಸಂರಕ್ಷಣೆಗೆ ಮಹಾವಿಷ್ಣು ರಾಮನ ರೂಪದಲ್ಲಿ ಅವತರಿಸಿದ" ಎಂದು ಶ್ರೀರಾಮನನ್ನು ಪರಿಚಯಿಸುತ್ತಾರೆ.
ಮೂರು ಲೋಕಗಳ ಸಾಕ್ಷಿಯಾಗಿ ಅವನನ್ನು ವಧಿಸುತ್ತೇನೆ ಎನ್ನುವ ಶ್ರೀರಾಮನ ಶಪಥದ ಮೂಲಕ ಟ್ರೈಲರ್ ಮತ್ತಷ್ಟು ಮಜಾ ಕೊಡುತ್ತದೆ. ಸೀತಾ ಅಪಹರಣ, ಜಟಾಯು- ರಾವಣನ ನಡುವಿನ ಯುದ್ಧ, ಕೊನೆಗೆ ಲಂಕೆ ಎಲ್ಲೇ ಇದ್ದರೂ ಅನ್ವೇಷಿಸಿ ಕಂಡು ಹಿಡಿಯುತ್ತೇನೆ.. ಇದು ರಾಮನ ಪ್ರತಿಜ್ಞೆ" ಎನ್ನುವ ಡೈಲಾಗ್ ಮೂಲಕ ಚಿತ್ರದ ಕಥೆ ಏನು ಎನ್ನುವುದನ್ನು ಹೇಳಲಾಗಿದೆ. ಅಂದ್ರೆ ಸೀತಾಪಹರಣದವರೆಗಿನ ಕಥೆಯನ್ನು ಮಾತ್ರ ಮೊದಲ ಭಾಗದಲ್ಲಿ ಹೇಳಲಾಗ್ತಿದೆ. ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬರಲಿದೆ. ಮೊದಲ ಟ್ರೈಲರ್ ಜೊತೆ ಹೋಲಿಸಿದರೆ ಹೊಸ ಟ್ರೈಲರ್ ಹುಬ್ಬೇರಿಸುವಂತಿದೆ.
'ರಾಮಾಯಣ' ಹೊಸ ಟ್ರೈಲರ್ ನೋಡಿದ್ರೆ ವಿಷ್ಯುವಲ್ಸ್, ಗ್ರಾಫಿಕ್ಸ್ ಎಲ್ಲವೂ ಅದ್ಧೂರಿಯಾಗಿದೆ. ರಾವಣನಾಗಿ ಯಶ್ ಆರ್ಭಟ ಜೋರಾಗಿಯೇ ಇದೆ. ಇನ್ನು ಬಹಳ ಡಿಲೈಟ್ಡ್ ಆಗಿ ಸಿಜಿ ವರ್ಕ್ ಮಾಡಿರುವುದು ಗೊತ್ತಾಗುತ್ತದೆ. ನಮಿತ್ ಮಲ್ಹೋತ್ರಾ ಹಾಗೂ ಯಶ್ ಸೇರಿ 'ರಾಮಾಯಣ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ದಶರಥನಾಗಿ ಅರುಣ್ ಗೋವಿಲ್, ಶೂರ್ಪನಖಿಯಾಗಿ ರಕುಲ್ ಪ್ರೀತ್ಸಿಂಗ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಶ್ರೀಧರ್ ರಾಘವನ್ ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ.