ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆಗೆ ಬರ್ತಿದೆ. ಸದ್ಯ ಸಿನಿಮಾ ಪ್ರಚಾರ ಆರಂಭಿಸಿದೆ ಚಿತ್ರತಂಡ. ಟೀಸರ್, ಟ್ರೈಲರ್ ಬಳಿಕ 'ಜೈ ಜೈ ರಾಮ್' ಸಾಂಗ್ ಸದ್ದು ಮಾಡ್ತಿದೆ. ಸದ್ಯ ರಣ್‌ಬೀರ್ ಕಪೂರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಮೇಕಿಂಗ್ ವೀಡಿಯೋ ಬಿಡುಗಡೆ ಆಗಿದೆ.

ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್ ಆಯ್ಕೆ ಮಾಡಿದ್ದೇಕೆ? ಆ ಪಾತ್ರವನ್ನು ಅವರು ಆವರಿಸಿಕೊಂಡಿದ್ದು ಹೇಗೆ? ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ಮೇಕಿಂಗ್ ವೀಡಿಯೋದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಧನುರ್ವಿದ್ಯೆ ಪ್ರದರ್ಶನದ ಝಲಕ್ ನೋಡಬಹುದು. ಬಹುತೇಕ ಬ್ಲೂ ಮ್ಯಾಟ್ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆದಿದೆ. ಬಳಿಕ ಅದಕ್ಕೆ ಗ್ರಾಫಿಕ್ಸ್ ಅಳವಡಿಸಿ ದೃಶ್ಯಕಾವ್ಯ ಕಟ್ಟಿಕೊಡಲಾಗಿದೆ.

ದಶರಥ ಪಾತ್ರಧಾರಿ ಅರುಣ್ ಗೋವಿಲ್, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ರಣ್‌ಬೀರ್ ಮೇಕಿಂಗ್ ವೀಡಿಯೋದಲ್ಲಿ ಮಾತನಾಡಿದ್ದಾರೆ. ಸಿನಿಮಾ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ಇದು ಕೇವಲ ನನಗೆ ಬಂದಿರುವ ಒಂದು ಚಿತ್ರದ ಅವಕಾಶ ಅಥವಾ ರೋಚಕ ಪಾತ್ರವಷ್ಟೇ ಅಲ್ಲ... ಇದೊಂದು ಜವಾಬ್ದಾರಿ" ಎಂದು ಭಾವಿಸಿ ಚಿತ್ರದಲ್ಲಿ ನಟಿಸಿದ್ದಾಗಿ ರಣ್‌ಬೀರ್ ಹೇಳಿದ್ದಾರೆ.

ಹಾಲಿವುಡ್ ಸ್ಟಂಟ್ ಮಾಸ್ಟರ್ ಟೆರ್ರಿ ನೋಟರಿ ಅವರು ರಣಬೀರ್‌ಗೆ ಸಾಹಸ ದೃಶ್ಯಗಳಿಗಾಗಿ ತರಬೇತಿ ನೀಡಿದ್ದಾರೆ. ಇನ್ನು ಗೈ ನಾರ್ರಿಸ್ ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. ಆ ವಿಚಾರವನ್ನು ಮೇಕಿಂಗ್ ವೀಡಿಯೋದಲ್ಲಿ ನೋಡಬಹುದು. ಇನ್ನು ಸಾಯಿ ಪಲ್ಲವಿ ಮಾತನಾಡಿ "ಚಿಕ್ಕಂದಿನಿಂದ ನನಗೆ ರಾಮ, ಸೀತೆ ಅಂದ್ರೆ ಒಂದು ಕಲ್ಪನೆ ಇತ್ತು. ಈಗ ಇದ್ದಕ್ಕಿದ್ದಂತೆ ಬಾಲ್ಯದಲ್ಲಿ ನಾನು ಕಂಡಿದ್ದ ಅದೇ ರಾಮನನ್ನು ನೋಡಿದಾಗ ನನಗೆ ಆಶ್ಚರ್ಯ ಹಾಗೂ ರೋಮಾಂಚನವಾಯಿತು" ಎಂದಿದ್ದಾರೆ.

ಶ್ರೀರಾಮನ ಪಾತ್ರಕ್ಕೆ ಸೂಕ್ತವಾದ ನಟನನ್ನು ಆಯ್ಕೆ ಮಾಡುವುದು ಬಹುಶಃ 'ರಾಮಾಯಣ' ನಿರ್ಮಾಣದ ಅತಿದೊಡ್ಡ ಸವಾಲಾಗಿತ್ತು ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. "ರಣಬೀರ್ ಕಪೂರ್ ಆ ಪ್ರಾಮಾಣಿಕತೆ ಅಥವಾ ಅವರ ಮುಖಭಾವವೇ ಸಾಕಾಗಿತ್ತು. ನಿತೇಶ್ ಹಾಗೂ ನನಗೆ ಈ ವಿಷಯದಲ್ಲಿ ಚರ್ಚಿಸಲು ಬೇರೆ ಕಾರಣವೇ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ. ಸದ್ಯ ಈ ಮೇಕಿಂಗ್ ವೀಡಿಯೋ ಸಖತ್ ವೈರಲ್ ಆಗ್ತಿದೆ. ಇದೇ ರೀತಿ ರಾವಣನಾಗಿ ಯಶ್ ಮೇಕಿಂಗ್ ಝಲಕ್ ಶೀಘ್ರದಲ್ಲೇ ಅನಾವರಣ ಆಗಲಿದೆ.