ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮತ್ತೊಂದು ಕಡೆ ಸಿನಿಮಾ ಬಗ್ಗೆ ಪ್ರಚಾರ ಮಾಡ್ತಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ನವೆಂಬರ್ 5ರಂದು ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ದಸರಾ ಸಂಭ್ರಮದಲ್ಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ಸದ್ಯ ಚಿತ್ರದ ಜಟಾಯು ಪೋಸ್ಟರ್ ಅನಾವರಣವಾಗಿದೆ.
'ರಾಮಾಯಣ' ಕಥೆಯಲ್ಲಿ ದೈವಿಕ ಹದ್ದು ಜಟಾಯು ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ದುಷ್ಟ ರಾವಣ ಸೀತೆಯನ್ನು ಅಪಹರಣ ಮಾಡುವಾಗ ಸಹಾಯಕ್ಕೆ ಬಂದಿದ್ದೇ ಜಟಾಯು. ತನ್ನ ಶಕ್ತಿಮೀರಿ ಪ್ರಯತ್ನಿಸಿ ಆಕೆಯನ್ನು ಉಳಿಸಲು ಜಟಾಯು ಪ್ರಯತ್ನಿಸಿ ಕೊನೆಗೆ ಸಾವನ್ನಪ್ಪುವಂತಾಯಿತು. ಎರಡು ಭಾಗಗಳಾಗಿ 'ರಾಮಾಯಣ' ಚಿತ್ರ ಬರ್ತಿದ್ದು ಮೊದಲ ಭಾಗದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಜಟಾಯು ಆರ್ಭಟ ನೋಡಬಹುದು.
ಜಟಾಯು ಜೊತೆ ರಾವಣನಾಗಿ ಯಶ್ ಕಾದಾಟಕ್ಕೆ ಇಳಿಯಲಿದ್ದಾರೆ. ಸಿಜಿ ಮೂಲಕ ತೆರೆಮೇಲೆ ಜಟಾಯು ಸೃಷ್ಟಿ ಆಗಲಿದೆ. ಆದರೆ ಹಿರಿಯ ನಟ ಅನುಪಮ್ ಖೇರ್ ತಮ್ಮ ಧ್ವನಿಯ ಮೂಲಕ ಅದಕ್ಕೆ ಜೀವ ತುಂಬಲಿದ್ದಾರೆ. ಜಟಾಯು ಪಾತ್ರಕ್ಕೆ ಅಮಿತಾಬ್ ಬಚ್ಚನ್ ಡಬ್ ಮಾಡ್ತಾರೆ ಎನ್ನಲಾಗಿತ್ತು. ಅಂತಿಮವಾಗಿ ಅನುಪಮ್ ಖೇರ್ ಆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದು ಬಹಳ ಕುತೂಹಲ ಮೂಡಿಸಿದೆ.
'ರಾಮಾಯಣ' ಕಥೆಯನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ಚಿತ್ರತಂಡ ವಿಶೇಷ ತಾಂತ್ರಿಕ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದೆ. DNEG ತಂಡ ಅದಕ್ಕಾಗಿ ಹಗಳಿರುಳು ಶ್ರಮಿಸುತ್ತಿದೆ. ಮುಖ್ಯವಾಗಿ ಐರಾವತ ಹಾಗೂ ಜಟಾಯು ಪಾತ್ರಗಳನ್ನು ಸಿಜಿಯಲ್ಲಿ ಬಹಳ ರೋಚಕವಾಗಿ ಚಿತ್ರಿಸಲಾಗ್ತಿದೆ. ಎ.ಆರ್. ರೆಹಮಾನ್ ಮತ್ತು ಹಾಲಿವುಡ್ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ ನಟನೆ ಹೇಗಿರುತ್ತದೆ ಎನ್ನುವ ಕುತೂಹಲ ಮೂಡಿದೆ. ನಿತೇಶ್ ತಿವಾರಿ ನಿರ್ದೇಶನದ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ಬಂದು ಸದ್ದು ಮಾಡ್ತಿದೆ. ಶೀಘ್ರದಲ್ಲೇ ಮತ್ತೊಂದು ಟ್ರೈಲರ್ ನಿರೀಕ್ಷಿಸಲಾಗ್ತಿದೆ. 'ಟಾಕ್ಸಿಕ್' ಸೋಲನ್ನು ಮರೆಸುವಂತೆ ರಾವಣನಾಗಿ ಯಶ್ ಅಬ್ಬರಿಸೋಕೆ ಬರ್ತಿದ್ದಾರೆ.