ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಯ 'ರಾಮಾಯಣ' ಸಿನಿಮಾ ಬಿಡುಗಡೆ ಸನಿಹವಾಗ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಚಿತ್ರದ ಪ್ರಚಾರ ನಡೀತಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದೆಲ್ಲದರ ನಡುವೆ ನಾಳೆ(ಅಕ್ಟೋಬರ್ 15)ಬೆಂಗಳೂರಿನಲ್ಲಿ ಅದ್ಧೂರಿ ಈವೆಂಟ್ ನಡೀತಿದೆ. ಈ ವೇಳೆ ಇಡೀ ಚಿತ್ರತಂಡ ಹಾಜರಾಗಲಿದೆ.
'ಟಾಕ್ಸಿಕ್' ಸಿನಿಮಾ ರಿಲೀಸ್ ಬಳಿಕ ಯಶ್ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮಗಳ ಮುಂದೆ ಬಂದಿಲ್ಲ. ಆದರೆ 'ರಾಮಾಯಣ' ಪ್ರಚಾರಕ್ಕಾಗಿ ಈವೆಂಟ್ಗೆ ಬರ್ತಿದ್ದಾರೆ. ಅವರ ಜೊತೆಗೆ ಇಡೀ ತಂಡ ಇರಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಯಶ್, ರಣ್ಬೀರ್, ಸಾಯಿಪಲ್ಲವಿ ಕೂಡ ಹಾಜರಾಗಲಿದ್ದಾರೆ. ಚಿತ್ರದ ಮತ್ತೊಂದು ಟೀಸರ್ ಬಿಡುಗಡೆ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಟೀಸರ್ ಬದಲು ಮೇಕಿಂಗ್ ವೀಡಿಯೋ ಅನಾವರಣವಾಗಲಿದೆ.
'ರಾಮಾಯಣ' ಚಿತ್ರದ ಏಳು ನಿಮಿಷಗಳ ಮೇಕಿಂಗ್ ವೀಡಿಯೋವನ್ನು ಚಿತ್ರತಂಡ ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಪ್ರದರ್ಶನ ಮಾಡಲಿದೆ. ಸಂಜೆ 6.15ಕ್ಕೆ ಓರಾಯನ್ ಮಾಲ್ ಆಡಿ ನಂ 5 ರಲ್ಲಿ ಈವೆಂಟ್ ಆರಂಭವಾಗಲಿದೆ. ನಿತೇಶ್ ತಿವಾರಿ ನಿರ್ದೇಶನದ, ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಡಿಎನ್ಇಜಿ ಸಂಸ್ಥೆಯ ಸಹಯೋಗದಲ್ಲಿ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಪಾಲುದಾರಿಕೆಯಲ್ಲಿ ಚಿತ್ರ ನಿರ್ಮಾಣವಾಗಿದೆ.
ನವೆಂಬರ್ 5ರಂದು 'ರಾಮಾಯಣ' ಸಿನಿಮಾ ಬಿಡುಗಡೆಯಾಗಲಿದೆ. ಅಕ್ಟೋಬರ್ 20ರಂದು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ದೇಶ ವಿದೇಶಗಳಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರಲಿದೆ.