ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ಒಟ್ಟು ಬಜೆಟ್ 4 ಸಾವಿರ ಕೋಟಿ ರೂಪಾಯಿ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದರು. ಯಶ್ ಕೂಡ ಇದು ಹೆಚ್ಚು ಕಮ್ಮಿ ನಿಜ ಎಂದು ಒಪ್ಪಿಕೊಂಡಿದ್ದರು. ಆ ಲೆಕ್ಕದಲ್ಲಿ ಮೊದಲ ಭಾಗದ ಬಜೆಟ್ 1500 ಕೋಟಿ ರೂಪಾಯಿ ಇರಬಹುದು ಎಂದು ಊಹಿಸಲಾಗ್ತಿದೆ. ಸದ್ಯ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಆದರೂ ಮುಂದೆ ದೊಡ್ಡ ಸವಾಲು ಇದೆ.
'ಪುಷ್ಪ'-2 ಹಾಗೂ 'ಧುರಂಧರ್-2' ರೀತಿಯ ಚಿತ್ರಗಳು ಮೊದಲ ಮೂರು ದಿನದಲ್ಲೇ 500 ಕೋಟಿ ರೂಪಾಯಿ ಬಾಚಿಕೊಂಡಿದ್ದವು. ಕ್ರೇಜ್, ರೆಸ್ಪಾನ್ಸ್ ಇದಕ್ಕಿಂತ ಜೋರಾಗಿ ಇತ್ತು. ಗ್ಲೋಬಲ್ ಮಟ್ಟದಲ್ಲಿ ಈ ಎರಡು ಸಿನಿಮಾಗಳಿಗಿಂತ ದೊಡ್ಡದಾಗಿ 'ರಾಮಾಯಣ' ಸಿನಿಮಾ ತೆರೆಗಪ್ಪಳಿಸಿದೆ. ಆ ಲೆಕ್ಕದಲ್ಲಿ ಗಳಿಕೆ ಇನ್ನು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ದೀಪಾವಳಿ ಹಬ್ಬದ ರಜೆ ಚಿತ್ರಕ್ಕೆ ವರವಾಗುತ್ತಾ ಕಾದು ನೋಡಬೇಕಿದೆ.
4 ದಿನಕ್ಕೆ 500 ಕೋಟಿ
ಶನಿವಾರ ಹಾಗೂ ಭಾನುವಾರ 'ರಾಮಾಯಣ' ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ ಸಿನಿಮಾ 500 ಕೋಟಿ ರೂಪಾಯಿ ಗಡಿ ದಾಟಿದೆ. ಭಾನುವಾರ ಭಾರತದಲ್ಲಿ ಸಿನಿಮಾ 56.15 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಒಟ್ಟು ಭಾರತದಲ್ಲಿ 285.20 crore ಗ್ರಾಸ್ ಜೊತೆಗೆ 238.85 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದಂತಾಗಿದೆ.
'ಆದಿಪುರುಷ್' ದಾಖಲೆ ಧೂಳ್
ಮೊದಲ ದಿನ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ದಾಖಲೆ ಮುರಿಯಲು ವಿಫಲವಾಗಿದ್ದ 'ರಾಮಾಯಣ' ಚಿತ್ರ ನಾಲ್ಕು ದಿನಕ್ಕೆ ಆ ಚಿತ್ರವನ್ನು ಹಿಂದಿಕ್ಕಿದೆ. ಮೊದಲ ನಾಲ್ಕು ದಿನಕ್ಕೆ 'ಆದಿಪುರುಷ್' ಸಿನಿಮಾ 236.15 ಕೋಟಿ ರೂ. ಗಳಿಸಿದ್ದಾಗಿ ವರದಿಯಾಗಿದೆ. ಪ್ರಭಾಸ್ ಸಿನಿಮಾ ಒಳ್ಳೆ ಓಪನಿಂಗ್ ಪಡೆದುಕೊಂಡರೂ ಬಳಿಕ ಟೀಕೆಗೆ ಗುರಿಯಾಗಿ ಸೋತಿತ್ತು. 'ರಾಮಾಯಣ' ನಿಧಾನವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡು ಮುನ್ನುಗ್ಗುತ್ತಿದೆ.
500 ಕೋಟಿ ರೂಪಾಯಿ
ಇವತ್ತು ಮತ್ತು ನಾಳೆ ಅಂದ್ರೆ ಸೋಮವಾರ, ಮಂಗಳವಾರ ದೀಪಾವಳಿ ಹಬ್ಬದ ರಜೆಯಿದೆ. ಇದು 'ರಾಮಾಯಣ' ಸಿನಿಮಾ ಗಳಿಕೆ ಹೆಚ್ಚಿಸುವ ನಿರೀಕ್ಷೆಯಿದೆ. ಎರಡು ದಿನ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.