ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಮೊದಲ ಭಾಗ ಮುಂದಿನ ವಾರ ಬಿಡುಗಡೆ ಆಗ್ತಿದೆ. ಈಗಾಗಲೇ ಅಮೆರಿಕಾದಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ಟ್ರೈಲರ್, ಸಾಂಗ್ಸ್ ಬಿಡುಗಡೆ ಆಗಿ ಗಮನ ಸೆಳೆದಿದೆ. ರಾಮಾಯಣ ಕಾವ್ಯ ತೆರೆಮೇಲೆ ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಇದೆಲ್ಲದರ ನಡುವೆ ಕೆಲವರಿಗೆ ಆತಂಕ ಶುರುವಾಗಿದೆ.

ಐತಿಹಾಸಿಕ, ಪೌರಾಣಿಕ ಸಿನಿಮಾಗಳನ್ನು ಮಾಡುವಾಗ ಬಹಳ ಎಚ್ಚರ ವಹಿಸಬೇಕು. ಎಲ್ಲರಿಗೂ ಗೊತ್ತಿರುವ ಕಥೆಯನ್ನು ಹೇಳುವಾಗ ತಪ್ಪು ನಡೆಯಬಾರದು. ಅದರಲ್ಲೂ ರಾಮಾಯಣ, ಮಹಾಭಾರತದಂತಹ ಕಥೆಯನ್ನು ಆರಿಸಿಕೊಂಡಾಗ ಮೂಲಕ್ಕೆ ಬದ್ಧವಾಗಿರಬೇಕಾಗುತ್ತದೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಬಾರದು. ಕ್ರಿಯೇಟಿವ್ ಲಿಬರ್ಟಿ ಹೆಸರಿನಲ್ಲಿ ಏನೇನೋ ತೋರಿಸಲು ಹೋದರೆ ಜನ ಒಪ್ಪಲ್ಲ. ಈ ಹಿಂದೆ 'ಆದಿಪುರುಷ್' ಸೇರಿ ಕೆಲ ಸಿನಿಮಾಗಳ ವಿಚಾರದಲ್ಲಿ ಇದು ಸಾಬೀತಾಗಿದೆ.

ಇವತ್ತಿಗೂ ಪ್ರಭಾಸ್ 'ಆದಿಪುರುಷ್' ಸಿನಿಮಾ ಬಗ್ಗೆ ಮಾತನಾಡಲು ಭಯಪಡುವಂತಾಗಿದೆ. ಅಷ್ಟರಮಟ್ಟಿಗೆ ಸಿನಿಮಾ ವಿವಾದಕ್ಕೆ ಕಾರಣವಾಗಿತ್ತು. ಸದ್ಯ 'ರಾಮಾಯಣ' ಚಿತ್ರದಲ್ಲೂ ಇಂತಹ ದೃಶ್ಯಗಳು ಇದ್ಯಾ ಎಂದು ಕೆಲವರು ಆತಂಕಗೊಂಡಿದ್ದಾರೆ. ಈಗಾಗಲೇ ಚಿತ್ರದ ಕೆಲ ದೃಶ್ಯಗಳ ಬಗ್ಗೆ ಚರ್ಚೆ ನಡೀತಿದೆ. ಸಿನಿಮಾ ಬಿಡುಗಡೆ ಆಗುವವರೆಗೂ ಕಾದು ನೋಡೋಣ ಎಂದು ಕೆಲವರು ಸುಮ್ಮನಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ ಹಾಡಿನಲ್ಲಿ ಜಟಾಯು ಪಕ್ಷಿ ಆಗಸದಲ್ಲಿ ಬಂದು ರಾಮ-ಸೀತೆ ಮೇಲೆ ಪುಷ್ಪವೃಷ್ಟಿ ಸುರಿಸುವ ಸಣ್ಣ ಝಲಕ್ ಇದೆ. ಈ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ವಾಲ್ಮೀಕಿ ರಾಮಾಯಣದ ಪ್ರಕಾರ ಅರಣ್ಯಕಾಂಡದಲ್ಲಿ ರಾಮ-ಸೀತೆ, ಲಕ್ಷ್ಮಣರಿಗೆ ಜಟಾಯು ಪಕ್ಷಿ ಎದುರಾಗುತ್ತದೆ. ಆದರೆ ರಾಮ-ಸೀತೆ ಮದುವೆ ಸಮಯದಲ್ಲಿ ಬಂದು ಪುಷ್ಪವೃಷ್ಟಿ ಮಾಡುವಂತೆ ಚಿತ್ರದಲ್ಲಿ ತೋರಿಸಿದ್ದಾರೆ. ನಿಜಕ್ಕೂ ಅದು ಜಟಾಯು ಪಕ್ಷಿನಾ ಅಥವಾ ಸಂಪಾತಿ ಪಕ್ಷಿನಾ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಪಂಚವಟಿಯಲ್ಲಿ ಸೀತಾಪಹರಣದ ಸಮಯದಲ್ಲಿ ರಾವಣನಿಗೆ ಜಟಾಯು ಎದುರಾಗುತ್ತದೆ. ಇಬ್ಬರ ನಡುವೆ ಘೋರ ಯುದ್ಧ ನಡೆದು ಕೊನೆಗೆ ಜಟಾಯು ಪ್ರಾಣತ್ಯಾಗ ಮಾಡುತ್ತದೆ.

ಜಟಾಯು ರಣಹದ್ದುಗಳ ರಾಜ. ದಶರಥನಿಗೂ ಸ್ನೇಹಿತ. ಸದ್ಯ ರಾಮಾಯಣ ಚಿತ್ರದ ಹಾಡಿನಲ್ಲಿ ತೋರಿಸಿರುವುದು ಜಟಾಯು ಅಲ್ಲ, ಅವನ ಸಹೋದರ ಸಂಪಾತಿ ಇರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸಂಪಾತಿ ಕೂಡ ರಾಮ-ಸೀತೆಗೆ ಮದುವೆಗೆ ಬಂದು ಆಶೀರ್ವದಿಸುವಂತಹ ಯಾವುದೇ ಉಲ್ಲೇಖ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಚಿತ್ರಕ್ಕಾಗಿ ನಿತೇಶ್ ತಿವಾರಿ ಇಂತಹ ದೃಶ್ಯ ಸೇರಿಸಿರಬಹುದು, ಇದೇ ರೀತಿ ಇನ್ನು ಏನೇನು ಬದಲಾವಣೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ ಎಂದು ಕೆಲವರು ಆತಂಕಗೊಂಡಿದ್ದಾರೆ.

ಟ್ರೈಲರ್‌ನಲ್ಲಿ ಜಟಾಯು ಪಕ್ಷಿ ಸಿಜಿ ಬಹಳ ಅದ್ಭುತವಾಗಿದೆ. ರಾವಣ ಹಾಗೂ ಜಟಾಯು ಯುದ್ಧ ಬಹಳ ರೋಚಕವಾಗಿರಲಿಲ್ಲ. ಇದೇ 'ರಾಮಾಯಣ' ಸಿನಿಮಾ ಮೊದಲ ಭಾಗದ ಕ್ಲೈಮ್ಯಾಕ್ಸ್. ಅಷ್ಟು ಅದ್ಭುತವಾಗಿ ಗ್ರಾಫಿಕ್ಸ್ ಮಾಡಿದ್ದೀವಿ, ಎನ್ನುವ ಕಾರಣಕ್ಕೆ ಇಲ್ಲದ ಸನ್ನಿವೇಶವನ್ನು ಸೃಷ್ಟಿಸಿ ಜಟಾಯು ಪಕ್ಷಿಯನ್ನು ರಾಮ-ಸೀತೆ ಮದುವೆ ಸನ್ನಿವೇಶದಲ್ಲಿ ಕೂಡ ತೋರಿಸಿಬಿಟ್ರಾ? ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಆಗುವರೆಗೂ ಸುಮ್ಮನಿರಿ. ಬರೀ ಟ್ರೈಲರ್, ಸಾಂಗ್ ನೋಡಿ ಏನೇನೊ ಮಾತಾಡಬೇಡಿ ಎಂದು ಕೆಲವರು ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.