ಬಾಕ್ಸಾಫೀಸ್‌ನಲ್ಲಿ 'ರಾಮಾಯಣ ಪಾರ್ಟ್‌-1' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಮೂರನೇ ದಿನವಾದ ಶನಿವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಫ್ಯಾಮಿಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಹಾಗಾಗಿ ಮುಂದೆ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಕ್ತಿದೆ.

ಮೊದಲ ಮೂರು ದಿನಕ್ಕೆ 375 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಮೊದಲ ದಿನ 155 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಹೇಳಿತ್ತು. ಶುಕ್ರವಾರ ಕೊಂಚ ಕಮ್ಮಿ ಆಗಿತ್ತು. ಆದರೆ ಶನಿವಾರ ಸಿನಿಮಾ ಅಸಲಿ ತಾಕತ್ತು ಪ್ರದರ್ಶನ ಮಾಡಿದೆ. ಮುಂದಿನ ಸಿನಿಮಾ ಗಳಿಕೆಗೆ ದಿಕ್ಸೂಚಿಯಾಗಿದೆ.

ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ 'ರಾಮಾಯಣ ಪಾರ್ಟ್‌-1' ಸಿನಿಮಾ ದೊಡ್ಡದಾಗಿ ತೆರೆಗಪ್ಪಳಿಸಿದೆ. ಸೋನಿ ಪಿಕ್ಚರ್ಸ್ ಸಂಸ್ಥೆ ವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದೆ. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

3 ದಿನದ ಗಳಿಕೆ

ಶನಿವಾರ 69 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಹಾಗಾಗಿ ಶುಕ್ರವಾರಕ್ಕಿಂತ 45.3%ರಷ್ಟು ಹೆಚ್ಚು ಗಳಿಕೆ ಕಂಡಂತಾಗಿದೆ. ಒಟ್ಟಾರೆ ಭಾರತದಲ್ಲಿ ಮೊದಲ ಮೂರು ದಿನಕ್ಕೆ 218 ಕೋಟಿ ರೂ. ಗ್ರಾಸ್ ಕಲೆಕ್ಷನ್ ಸೇರಿ 182 ಕೋಟಿ ನೆಟ್ ಕಲೆಕ್ಷನ್ ಮಾಡಿದೆ ಎಂದು Sacnilk ವೆಬ್‌ಸೈಟ್ ವರದಿ ಮಾಡಿದೆ. ವಿಶ್ವದಾದ್ಯಂತ 375 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

ಭಾನುವಾರ ನಿರ್ಣಾಯಕ

ನಾಲ್ಕನೇ ದಿನವಾದ ಇಂದು ಭಾನುವಾರ. ದೀಪಾವಳಿ ಸಂಭ್ರಮ. ಹಾಗಾಗಿ ಇವತ್ತು ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎನ್ನುವುದು ಬಹಳ ಮುಖ್ಯ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಪ್ರತಿ ರೂಪಾಯಿ ತೆರೆಮೇಲೆ ಕಾಣಿಸ್ತಿದೆ. ಹಾಗಾಗಿ ಸಿನಿಮಾ ಇನ್ನು ದೊಡ್ಡದಾಗಿ ಕಲೆಕ್ಷನ್ ಮಾಡಬೇಕಿದೆ. ಈಗಾಗಲೇ ಸಿನಿಮಾ ನೋಡಿರುವ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ವಿಮರ್ಶಕರಿಂದಲೂ ಒಳ್ಳೆ ಅಂಕ ಸಿಕ್ಕಿದೆ. ಮುಂದೆ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಕಾದು ನೋಡಬೇಕಿದೆ.