ರಣ್ಬೀರ್ ಹಾಗೂ ಯಶ್ ಆರ್ಭಟಕ್ಕೆ ಬಾಕ್ಸಾಫೀಸ್ನಲ್ಲಿ ಹಳೇ ದಾಖಲೆಗಳೆಲ್ಲಾ ಧೂಳೀಪಟವಾಗ್ತಿದೆ. ಇವತ್ತು 'KGF -2' ದಾಖಲೆಯನ್ನು ಅಳಿಸಿ 'ರಾಮಾಯಣ' ಮುನ್ನುಗ್ಗುತ್ತಿದೆ. ಮುಂದೆ 'ಧುರಂಧರ್-2' ದಾಖಲೆಯನ್ನು ಮೀರಿ ಈ ಪೌರಾಣಿಕ ಸಿನಿಮಾ ಮುನ್ನುಗ್ಗುತ್ತಾ ಎನ್ನುವ ಚರ್ಚೆ ಶುರುವಾಗಿದೆ.
ಈಗಾಗಲೇ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 'ರಾಮಾಯಣ' ಸದ್ದು ಮಾಡ್ತಿದೆ. 'ಕಲ್ಕಿ', 'ಪಠಾಣ್', 'ಜವಾನ್' ಸಿನಿಮಾಗಳ ದಾಖಲೆ 10 ದಿನಕ್ಕೆ ಧೂಳಿಪಟವಾಗಿದೆ. ಎರಡನೇ ಭಾನುವಾರವಾದ ಇಂದು(ನವೆಂಬರ್ 15) ಸಿನಿಮಾ ಹೇಗೆ ಸದ್ದು ಮಾಡುತ್ತೆ ಕಾದು ನೋಡಬೇಕಿದೆ. ಸಿನಿಮಾ ಅಂತಿಮವಾಗಿ ಎಷ್ಟು ಗಳಿಕೆ ಕಾಣುತ್ತದೆ ಎನ್ನುವ ಲೆಕ್ಕಾಚಾರವೂ ಶುರುವಾಗಿದೆ.
ಮುಂದಿದೆ 'RRR' ದಾಖಲೆ
ಮೊದಲ 10 ದಿನಕ್ಕೆ 'ರಾಮಾಯಣ' ಸಿನಿಮಾ ವಿಶ್ವದಾದ್ಯಂತ 1,228 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ವರದಿಯಾಗಿದೆ. 4 ವರ್ಷಗಳ ಹಿಂದೆ ಯಶ್ ನಟನೆಯ 'KGF -2' ಸಿನಿಮಾ 1,250 ಕೋಟಿ ರೂ. ಗಳಿಕೆ ಕಂಡಿದ್ದಾಗಿ ಹೇಳಲಾಗಿತ್ತು. ಆ ದಾಖಲೆ ಇಂದು ಅಳಿಸಿ ಹೋಗಲಿದೆ. ರಾಜಮೌಳಿ ನಿರ್ದೇಶನದ 'RRR' ಸಿನಿಮಾ 1300 ಕೋಟಿ ರೂ. ದಾಖಲೆ ಬರೆದಿತ್ತು. ಅದನ್ನು ಇವತ್ತು ಅಥವಾ ನಾಳೆ 'ರಾಮಾಯಣ' ಸಿನಿಮಾ ಹಿಂದಿಕ್ಕಲಿದೆ.
'ಪುಷ್ಪ- 2' ದಾಖಲೆ ?
ಎರಡನೇ ವಾರ ಕೂಡ 'ರಾಮಾಯಣ' ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಇನ್ನು ಎರಡು ವಾರ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಯಲಿದೆ. ಹಾಗಾಗಿ ಕೊನೆಗೆ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಕಳೆದ ವರ್ಷ 'ಧುರಂಧರ್' ಸಿನಿಮಾ 1,400 ಕೋಟಿ ರೂ. ಬಾಚಿಕೊಂಡಿತ್ತು. ಇದನ್ನು 'ರಾಮಾಯಣ' ಹಿಂದಿಕ್ಕುವುದು ಪಕ್ಕಾ ಎನ್ನಲಾಗ್ತಿದೆ. ಆ ಬಳಿಕ 1,800 ಕೋಟಿ ರೂ. ಕೊಳ್ಳೆ ಹೊಡೆದಿದ್ದ 'ಪುಷ್ಪ- 2' ಇದೆ. 'ರಾಮಾಯಣ' ಸಿನಿಮಾ ಈ ದಾಖಲೆಯನ್ನು ಮುರಿಯುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.
ಕರ್ನಾಟಕದಲ್ಲಿ 'ರಾಮಾಯಣ'
ರಾಜ್ಯದಲ್ಲಿ 9 ದಿನಕ್ಕೆ 'ರಾಮಾಯಣ' ಚಿತ್ರದ ಕನ್ನಡ ವರ್ಷನ್ ಮಾತ್ರ 62.3 ಕೋಟಿ ರೂ. ಗಳಿಸಿದೆ. ಈಗಾಗಲೇ 100 ಕೋಟಿ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ರಾಜ್ಯದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿ ಬಾಲಿವುಡ್ ಸಿನಿಮಾ ಎನ್ನುವ ದಾಖಲೆ ಬರೆಯಲು ಸಿನಿಮಾ ಸಜ್ಜಾಗುತ್ತಿದೆ.