ಬಾಕ್ಸಾಫೀಸ್‌ನಲ್ಲಿ 'ರಾಮಾಯಣ' ಸಿನಿಮಾ ಆರ್ಭಟ ಮುಂದುವರೆದಿದೆ. ಇದೀಗ ಆಸ್ಕರ್ ಪ್ರಶಸ್ತಿ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ. 99ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಮರಾಠಿ ಚಲನಚಿತ್ರ 'ಗೊಂಡಲ್' (Gondhal) ಅಧಿಕೃತವಾಗಿ ಪ್ರವೇಶ ಪಡೆಯಲು ಆಯ್ಕೆಯಾಗಿದೆ. ಆದರೆ 'ರಾಮಾಯಣ ಪಾರ್ಟ್- 1' ಚಿತ್ರ ಸ್ವತಂತ್ರವಾಗಿ ಸ್ಪರ್ಧೆಗೆ ಮುಂದಾಗಿದೆ.

ನಾಲ್ಕು ವರ್ಷಗಳ ಹಿಂದೆ ರಾಜಮೌಳಿ ನಿರ್ದೇಶನದ 'RRR' ಚಿತ್ರ ಸ್ವತಂತ್ರವಾಗಿ ಆಸ್ಕರ್ ಸ್ಪರ್ಧೆಗೆ ಹೋಗಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಅದೇ ರೀತಿ ಈಗ 'ರಾಮಾಯಣ ಪಾರ್ಟ್- 1' ಚಿತ್ರವನ್ನು ಸ್ಪರ್ಧೆಗೆ ಕಳಿಸಲಾಗ್ತಿದೆ. ಅತ್ಯುತ್ತಮ ಚಿತ್ರ, ಮೂಲ ಸಂಗೀತ, ಮೂಲ ಹಾಡು, ಛಾಯಾಗ್ರಹಣ, ನಿರ್ಮಾಣ ವಿನ್ಯಾಸ, ವಿಷ್ಯುವಲ್ ಎಫೆಕ್ಟ್ಸ್ ಮತ್ತು ಸೌಂಡ್ ಡಿಸೈನ್ ಸೇರಿದಂತೆ ಹಲವು ವಿಭಾಗಗಳಲ್ಲಿ ಚಿತ್ರ ಸ್ಪರ್ಧೆಗೆ ಹೋಗಲಿದೆ. ಇದು ಆಸ್ಕರ್ ನಾಮಿನೇಷನ್‌ ಅಲ್ಲ, ಬದಲಿಗೆ ಚಿತ್ರವನ್ನು ಸ್ಪರ್ಧೆಗೆ ಪರಿಗಣಿಸುವಂತೆ ಅರ್ಜಿ ಸಲ್ಲಿಸಲಾಗಿದೆ.

'ರಾಮಾಯಣ' ಚಿತ್ರ ನಾಮಿನೇಷನ್ ಹಾಗೂ ಪ್ರಶಸ್ತಿ ಸುತ್ತಿಗೆ ಹೋಗಲು ಇನ್ನು ಸಾಕಷ್ಟು ದೂರ ಕ್ರಮಿಸಬೇಕಿದೆ. ಈಗಾಗಲೇ ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಹಾಗಾಗಿ ಅಕಾಡೆಮಿ ಕಣ್ಣಿಗೆ ಬೀಳುವುದು ಕಷ್ಟವಾಗಲ್ಲ. ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಯಶ್ ಅವರಿಗೆ ಆಸ್ಕರ್ ಸಿಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ವಿಷ್ಯುವಲ್ ಎಫೆಕ್ಟ್ಸ್ ವಿಭಾಗದಲ್ಲಿ ಚಿತ್ರಕ್ಕೆ ಪ್ರಶಸ್ತಿ ಸಿಗುವ ನಿರೀಕ್ಷೆಯಿದೆ. ಆಸ್ಕರ್ ವೇದಿಕೆಯಲ್ಲಿ ಭಾರತೀಯ ಸಿನಿಮಾಗಳ ಸಾಧನೆ ಗೌಣವಾಗಿದೆ. 'ನಾಟು ನಾಟು' ಗೀತೆಗೆ ಪ್ರಶಸ್ತಿ ಸಿಕ್ಕಿದ್ದು ಬಿಟ್ಟರೆ ಅಂತಹ ಸಾಧನೆ ಮಾಡಿಲ್ಲ. ನಾಮಿನೇಷನ್ ವಿಭಾಗದವರೆಗೆ ಭಾರತೀಯ ಸಿನಿಮಾಗಳು ಹೋಗುವುದೇ ಕಷ್ಟ ಎನ್ನುವಂತಾಗಿದೆ.

ಹಲವು ಹಾಲಿವುಡ್ ಚಿತ್ರಗಳಿಗೆ DNEG ಸಂಸ್ಥೆ ಗ್ರಾಫಿಕ್ಸ್ ಡಿಸೈನ್ ಮಾಡಿದೆ. 8 ಅಕಾಡೆಮಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅದೇ ಸಂಸ್ಥೆ ಈಗ 'ರಾಮಾಯಣ' ಚಿತ್ರಕ್ಕೂ ದೃಶ್ಯವೈಭವ ಸೃಷ್ಟಿಸಿದೆ. ಹಾಗಾಗಿ ಆಸ್ಕರ್ ಪ್ರಶಸ್ತಿ ಸಿಗುವ ನಿರೀಕ್ಷೆ ಹೆಚ್ಚಾಗಿದೆ.