ವರ್ಷದ ಹಿಟ್ ಸಿನಿಮಾಗಳಲ್ಲಿ ರಾಜ್‌ ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಸಿನಿಮಾ ಕೂಡ ಜಾಗ ಮಾಡಿಕೊಂಡಿದೆ. ಅಬ್ಬಬ್ಬಾ ಎನ್ನುವಂತಹ ಕಲೆಕ್ಷನ್ ಮಾಡದೇ ಇದ್ದರೂ ಹಾಕಿದ ಹಣಕ್ಕೆ ಮೋಸ ಇಲ್ಲ ಎನ್ನುವಂತಾಗಿತ್ತು. ನಿರ್ಮಾಪಕ ರವಿವರ್ಮಾ ಮೊಗದಲ್ಲೂ ಮಂದಹಾಸಕ್ಕೆ ಕಾರಣವಾಗಿತ್ತು. ಕೊನೆಗೂ ಸಿನಿಮಾ ಓಟಿಟಿಗೆ ಬಂದಿದೆ.

ಸಾಕಷ್ಟು ಜನ ಓಟಿಟಿಯಲ್ಲಿ 'ರಕ್ಕಸಪುರದೋಳ್' ಸಿನಿಮಾ ನೋಡಲು ಕಾತರರಾಗಿದ್ದರು. ಸದ್ಯ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ವೀಕ್ಷಿಸಬಹುದು. ರವಿ ಸಾರಂಗ ನಿರ್ದೇಶನದ ಈ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಹೀರೊ ಆಗಿ ನಟಿಸಿದ್ದಾರೆ. SI ಶಿವ ಪಾತ್ರದಲ್ಲಿ ಅವರ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ನೆಗೆಟಿವ್ ಪಾತ್ರದಲ್ಲಿ ಅನಿರುದ್ಧ್ ಭಟ್ ನಟನೆ ಚಿತ್ರದ ಹೈಲೆಟ್ ಎನಿಸಿಕೊಂಡಿತ್ತು. ತೆಲುಗಿಗೂ ಡಬ್ ಆಗಿ ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಆಗಿತ್ತು.

ಅರ್ಜುನ್ ಜನ್ಯಾ ಸಂಗೀತ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ವಿತರಣೆ ಮಾಡಿತ್ತು. ಸ್ಟಂಟ್ ಮಾಸ್ಟರ್ ರವಿವರ್ಮಾ 'ರಕ್ಕಸಪುರದೋಳ್' ಸಿನಿಮಾ ನಿರ್ಮಿಸಿ ಗೆದ್ದಿದ್ದರು. ಫೆಬ್ರವರಿ 6ರಂದು ಸಿನಿಮಾ ಬಿಡುಗಡೆ ಆಗಿತ್ತು. ಬರೋಬ್ಬರಿ 7 ತಿಂಗಳ ಬಳಿಕ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿದೆ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ತಲುಪಲಿಲ್ಲ. ಇನ್ನು ದೊಡ್ಡಮಟ್ಟದ ಯಶಸ್ಸು ಚಿತ್ರಕ್ಕೆ ಸಿಗಬೇಕಿತ್ತು ಎಂದು ಸಾಕಷ್ಟು ಜನ ಹೇಳಿದ್ದರು. ಓಟಿಟಿಯಲ್ಲಿ ಆ ಮೆಚ್ಚುಗೆ ಸಿಗುತ್ತಾ ಕಾದು ನೋಡಬೇಕಿದೆ.

ರಕ್ಕಸಪುರದೋಳ್ ಎಂಬ ಹಳ್ಳಿಯಲ್ಲಿ ನಡೆಯುವ ನಿಗೂಢ ಹತ್ಯೆ ಪ್ರಕರಣಗಳನ್ನು SI ಶಿವ ಹೇಗೆ ಭೇದಿಸುತ್ತಾನೆ ಎನ್ನುವುದು ಸಿನಿಮಾ ಕಥೆ. ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಆತನಿಗೆ ಎದುರಾಗುವ ಸವಾಲುಗಳೇನು ? ಸರಣಿ ಹತ್ಯೆಗಳಿಗೆ ಕೊಳ್ಳಿ ದೆವ್ವ ಕಾರಣ ಎನ್ನುವುದು ಊರಿನ ಜನರ ನಂಬಿಕೆ. ಆದರೆ ಸತ್ಯ ಏನು ಎನ್ನುವುದು ಸಿನಿಮಾ ಕೊನೆಯಲ್ಲಿ ಅನಾವರಣವಾಗುತ್ತದೆ.