ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿದ್ದಾರೆ. 'ಧರ್ಮನ್' ಚಿತ್ರಕ್ಕಾಗಿ ಅವ್ರು ಅರಮನೆ ನಗರಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಹಿಂದೆ ಕೂಡ ತಲೈವಾ ನಟಿಸಿದ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆದಿತ್ತು. ಮಂಗಳೂರಿನಲ್ಲಿ 'ಜೈಲರ್' ಸಿನಿಮಾ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ರಜನಿಕಾಂತ್ ಜೊತೆ ಶಿವಣ್ಣ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.

ಅಶ್ವಥ್ ಮಾರಿಮುತ್ತು ನಿರ್ದೇಶನದ 'ಧರ್ಮನ್' ಚಿತ್ರವನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವುದು ವಿಶೇಷ. ಸಿಮ್ರನ್, ರಾಶಿ ಖನ್ನಾ, ರಾಮ್ ಪೊತಿನೇನಿ, ಯೋಗಿ ಬಾಬು ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನಲ್ಲಿ ಸಿನಿಮಾ ಸೆಟ್‌ಗೆ ಆಟೋ ಏರಿ ರಜನಿಕಾಂತ್ ಬಂದಿದ್ದಾರೆ. ಅಭಿಮಾನಿಗಳತ್ತ ಕೈಬೀಸಿದ್ದಾರೆ. ಇನ್ನು ಅರಮನೆ ನಗರಿಯಲ್ಲಿ ವಿಷ್ಣುವರ್ಧನ್ ಕುಟುಂಬಸ್ಥರು ತಲೈವಾ ಭೇಟಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಅನಿರುದ್ಧ್ ಜತ್ಕರ್ ಹಂಚಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಐತಿಹಾಸಿಕ ತಾಣ ಸೋಮನಾಥಪುರದಲ್ಲಿ 'ಧರ್ಮನ್' ಸಿನಿಮಾ ಚಿತ್ರೀಕರಣ ನಡೀತಿದೆ. ಅಲ್ಲಿಗೆ ಭಾರತಿ ವಿಷ್ಣುವರ್ಧನ್ ಮಗಳು, ಅಳಿಯ ಹಾಗೂ ಮೊಮ್ಮಕ್ಕಳ ಜೊತೆ ತೆರಳಿ ರಜನಿಕಾಂತ್ ಭೇಟಿ ಮಾಡಿದ್ದಾರೆ. ಇನ್ನು ತಲೈವಾ ಜೊತೆ ನಟಿ ರಾಶಿಖನ್ನಾ ಹಾಗೂ ರಾಮ್ ಪೊತಿನೇನಿ ಕೂಡ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿದ್ದಾರೆ. ಟಿ. ನರಸೀಪುರ ತಾಲೂಕಿನ ಪ್ರಸಿದ್ಧ ಹೊಯ್ಸಳರ ಕಾಲದ ಕೇಶವ ದೇವಾಲಯದ ಆವರಣದಲ್ಲಿ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿಯಲಾಗ್ತಿದೆ. ನೆಚ್ಚಿನ ನಟನನ್ನು ನೋಡಲು ಸಾಕಷ್ಟು ಅಭಿಮಾನಿಗಳು ಅಲ್ಲಿ ಜಮಾಯಿಸುತ್ತಿದ್ದಾರೆ.

ಕಳೆದ ವರ್ಷ ಮೈಸೂರಿನ ಹುಣಸೂರು ತಾಲ್ಲೂಕು ಬಿಳಿಕೆರೆ ಗ್ರಾಮದಲ್ಲಿ 'ಜೈಲರ್'- 2 ಸಿನಿಮಾ ಚಿತ್ರೀಕರಣ ಸಹ ನಡೆದಿತ್ತು. ಅರಮನೆ ಮುಂಭಾಗದಲ್ಲಿ ತಲೈವಾ ನಟನೆಯ 'ಲಿಂಗ' ಸಿನಿಮಾ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. 'ದಳಪತಿ' ಚಿತ್ರವನ್ನು ಮೈಸೂರು, ಮೇಲುಕೋಟೆ ಸುತ್ತಾಮುತ್ತಾ ಮಣಿರತ್ನಂ ಚಿತ್ರೀಕರಣ ಮಾಡಿದ್ದರು.