ನಟಿ ಲೀಲಾವತಿ ಮಗ ವಿನೋದ್ ರಾಜ್ ಅವರ ನಿಜವಾದ ಅಪ್ಪ ಯಾರು? ಇಂತಾದೊಂದು ಪ್ರಶ್ನೆ ದಶಕಗಳಿಂದ ಸುದ್ದಿಯಲ್ಲಿದೆ. ಈ ವಿಚಾರ ಪದೇ ಪದೆ ಚರ್ಚೆ ಆಗುತ್ತಲೇ ಇದೆ. ಪತ್ರಕರ್ತ ದಿವಂಗತ ರವಿ ಬೆಳಗೆರೆ ಬರೆದ 'ರಾಜ್ ಲೀಲಾ ವಿನೋದ' ಅನ್ನೋ ಪುಸ್ತಕ ವಿವಾದಕ್ಕೀಡಾಗಿತ್ತು. ಇತ್ತೀಚೆಗೆ ಅದಕ್ಕೆ ಕೌಂಟರ್ ಎನ್ನುವಂತೆ 'ಲೀಲಮ್ಮ' ನಿನ್ನ ಗಂಡ ಯಾರಮ್ಮ?' ಎನ್ನುವ ಹೆಸರಿನಲ್ಲಿ ಪುಸ್ತಕ ಬಿಡುಗಡೆಯಾಗಿ ಮತ್ತೆ ಚರ್ಚೆಗೆ ಗ್ರಾಸವಾಗಿತ್ತು.

ರಂಗಭೂಮಿ ಕಲಾವಿದರಾಗಿದ್ದ ಮಹಾಲಿಂಗ ಭಾಗವತರ್ ಅವರು ಲೀಲಾವತಿ ಅವರ ಗಂಡ. ಅಣ್ಣಾವ್ರ ಚಾರಿತ್ರ್ಯವಧೆ ಮಾಡಲು ಕೆಲವರು ಇಲ್ಲಸಲ್ಲದ ವದಂತಿ ಹಬ್ಬಿಸಿದರು. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ ಮಾಡಿದ್ದರು ಎನ್ನುವುದು ಕೆಲವರ ಆರೋಪ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪದೇ ಪದೆ ಚರ್ಚೆ ಆಗುತ್ತಲೇ ಇರುತ್ತದೆ. ಅಣ್ಣಾವ್ರು ಹಾಗೂ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅಲ್ಲ ಎಂದು ಕೆಲವರು ಬಲವಾಗಿ ವಾದಿಸುತ್ತಾ ಬಂದಿದ್ದಾರೆ. ಡಾ. ರಾಜ್ ಅವರ ಕಟ್ಟಾಭಿಮಾನಿ ಎನ್. ಆರ್ ರಮೇಶ್ ಹಾಗೂ ನಿರ್ದೇಶಕ, ಅಣ್ಣಾವ್ರ ಕುಟುಂಬಕ್ಕೆ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ಪದೇ ಪದೆ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನು 'ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲಿರುವ ಫೋಟೊ ಫೇಕ್ ಎಂದು ಹೇಳುತ್ತಾ ಬರ್ತಿದ್ದಾರೆ.

ಅಣ್ಣವ್ರ ತೊಡೆ ಮೇಲೆ ಒಂದು ಮಗು ಕುಳಿತಂತೆ ಪಕ್ಕದಲ್ಲೇ ಲೀಲಾವತಿ ಅವರು ಇರುವಂತೆ ಫೋಟೊವೊಂದು ಬಹಳ ದಿನಗಳಿಂದ ಸದ್ದು ಮಾಡ್ತಿದೆ. ಆ ಮಗು ವಿನೋದ್ ರಾಜ್ ಎಂದು ಬಹುತೇಕರು ನಂಬಿದ್ದಾರೆ. ಇದೇ ಫೋಟೊ ಲೀಲಾವತಿ ಅವರ ಮನೆಯಲ್ಲಿ ಕೂಡ ಇತ್ತು. ಈ ಫೋಟೊದಲ್ಲಿ ಇರುವ ಮಗು ವಿನೋದ್ ರಾಜ್‌ ಅಲ್ಲ ಶಿವಣ್ಣ ಎಂದು ಇದೀಗ ಎನ್. ಆರ್ ರಮೇಶ್ ಹೇಳಿದ್ದಾರೆ. Speed News Kannada ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಅದು ಮಾರ್ಪ್ ಮಾಡಿರುವ ಫೋಟೊ, ಆ ಫೋಟೊದಲ್ಲಿರುವ ಮಗು ಶಿವಣ್ಣ ಎಂದು ವಾದಿಸಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಶಕುನಿ ಅಥವಾ ಮೀರ್ ಸಾದಕ್ ಯಾರು ಅಂದ್ರೆ ಅದು ದ್ವಾರಕೀಶ್ ಎಂದು ಎನ್. ಆರ್ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ದ್ವಾರಕೀಶ್ ಚಿತ್ರನಿರ್ಮಾಪಕ ಆಗಬೇಕು ಎಂದಾಗ ಅವಕಾಶ ಕೊಟ್ಟವರು ಅಣ್ಣಾವ್ರು. ಆದ್ರೆ 'ಭಾಗ್ಯವಂತರು' ಸಿನಿಮಾ ಸಮಯದಲ್ಲಿ ಅವ್ರು ಆಡಿದ ಮಾತುಗಳಿಂದ ಬೇಸತ್ತು ಪಾರ್ವತಮ್ಮ ದೂರ ಇಟ್ಟಿದ್ರು. ಬಳಿಕ ವಿಷ್ಣುವರ್ಧನ್ ಅವ್ರಿಗೆ ದ್ವಾರಕೀಶ್ ಹತ್ತಿರವಾಗಿದ್ದರು. ವಿಷ್ಣು ಸ್ನೇಹವನ್ನು ಅವ್ರು ಉಳಿಸಿಕೊಳ್ಳಲಿಲ್ಲ. ಮುಂದೆ ಶಿವಣ್ಣ ಚಿತ್ರರಂಗಕ್ಕೆ ಬಂದು ಹ್ಯಾಟ್ರಿಕ್ ಹೀರೊ ಎನಿಸಿಕೊಂಡ್ರು. ಆಗ ಶಿವಣ್ಣನ ಕಾಲ್‌ಶೀಟ್ ಕೇಳಿದ್ರು. ಪಾರ್ವತಮ್ಮ ಕೊಡಲ್ಲ ಎಂದಾಗ ಕೋಪನಿಂದ ಶಿವಣ್ಣನಿಗೆ ಪರ್ಯಾಯವಾಗಿ ಮತ್ತೊಬ್ಬ ನಟನನ್ನು ಕರೆತರ್ತೀನಿ ಎಂದು ವಿನೋದ್ ರಾಜ್ ಎಂ ಎಲ್ ಎನ್ನುವವರನ್ನು 'ವಿನೋದ್ ರಾಜ್' ಎಂದು ಚಿತ್ರರಂಗಕ್ಕೆ ಪರಿಚಯಿಸಿ ಜನರಲ್ಲಿ ಗೊಂದಲ ಮೂಡಿಸುವ ವಿಷ ಬೀಜ ಬಿತ್ತಿದ್ರು ಎಂದು ಆರೋಪಿಸಿದ್ದಾರೆ.

ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದು ಬಳಿಕ ಬಿಡುಗಡೆ ಮಾಡಿದ್ದು ಗೊತ್ತೇಯಿದೆ. ಅಲ್ಲಿಂದ ಬಿಡುಗಡೆಯಾಗಿ ಬಂದ ಮೇಲೆ ರವಿ ಬೆಳಗೆರೆ ಒಂದು ಸಂದರ್ಶನ ಕೇಳಿದ್ರು. ಮೊದಲಿಗೆ ಸಂದರ್ಶನ ಕೊಡಿಸುವುದಾಗಿ ಪಾರ್ವತಮ್ಮ ಬೆಳಗೆರೆ ಅವರಿಗೆ ಮಾತು ಕೊಟ್ಟಿದ್ರು. ಅಲ್ಲಿಯವರೆಗೆ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ಅಣ್ಣಾವ್ರ ಬಗ್ಗೆ ಪಾಸಿಟಿವ್ ಆಗಿಯೇ ಬರೆಯುತ್ತಿದ್ರು. ಕಾರಣಾಂತರಗಳಿಂದ ಸಂದರ್ಶನ ಕೊಡಲು ಆಗಲ್ಲ ಎಂದು ನಿರಾಕರಿಸಿದ್ದರು. ಅಂತಹ ಸಮಯದಲ್ಲಿ ಲೀಲಾವತಿ ಅವರು ಸಂದರ್ಶನ ಕೊಟ್ಟು 'ರಾಜ್ ಲೀಲಾ ವಿನೋದ' ಎಂಬ ಪುಸ್ತಕವನ್ನು ಬೆಳಗೆರೆ ಬರೆದರು. ಪುಸ್ತಕದಲ್ಲಿ ಅಣ್ಣಾವ್ರು ಹಾಗೂ ಲೀಲಾವತಿ ಇಬ್ರು ಮಗು ಜೊತೆ ಇರುವ ಫೋಟೊ ಮಾರ್ಪ್ ಮಾಡಿ ಬಳಸಿದ್ರು. ಈ ಬಗ್ಗೆ ನಾನು ದೂರು ಕೊಟ್ಟಿದ್ದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಇದು ಫೇಕ್ ಫೋಟೊ, ಮಾರ್ಪ್ ಮಾಡಿರುವುದು ಎನ್ನುವ ವರದಿ ಸಹ ಬಂದಿತ್ತು. ಫೋಟೊದಲ್ಲಿ ರಾಜ್ಕುಮಾರ್ ತೊಡೆ ಮೇಲೆ ಕುಳಿತ್ತಿರುವುದು ಶಿವರಾಜ್‌ಕುಮಾರ್(ಬಾಲ್ಯದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ) ಎಂದು ಎನ್. ಆರ್ ರಮೇಶ್ ತಿಳಿಸಿದ್ದಾರೆ.

ರವಿ ಬೆಳಗೆರೆ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದೆವು. ಅದಕ್ಕೆ ಉತ್ತರಿಸದೇ ಇದ್ದಾಗ ವಾರೆಂಟ್ ಜಾರಿ ಆಗಿತ್ತು. ಅದು ಫ್ಯಾಬ್ರಿಕೇಟೆಡ್ ಫೋಟೊ. ಬೆಳಗೆರೆ ಕ್ಷಮೆ ಕೇಳ್ತಾರೆ ಎಂದುಕೊಳ್ಳುವ ಸಮಯಕ್ಕೆ ಅವರು ನಿಧನರಾಗಿದ್ದರು. ಯಾರು ಈ ಬಗ್ಗೆ ಧ್ವನಿ ಎತ್ತದೇ ಇದ್ದಿದ್ದರಿಂದ ಸುಳ್ಳನ್ನೇ ಕೆಲವರು ನಿಜ ಎಂದು ನಂಬಿಬಿಟ್ಟರು. ಅಣ್ಣಾವ್ರ ಮನೆಯವರು ಕೂಡ ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಹಾಗಾಗಿ ಅದೇ ಸತ್ಯ ಎಂದುಕೊಂಡ್ರು.