ಎಷ್ಟೇ ಮೇಲಕ್ಕೆ ಏರಿದ್ರು ಕಾಲು ಕೆಳಗಿನ ನೆಲವನ್ನು ಮರೆಯಬಾರದು. ಈ ವಿಚಾರದಲ್ಲಿ ರಜನಿಕಾಂತ್ ಯಾವತ್ತು ಮುಂದೆ ನಿಲ್ತಾರೆ. ಅದಕ್ಕೆ ಅವರನ್ನು ಸೂಪರ್ ಸ್ಟಾರ್ ಎನ್ನುವುದು. ಒಂದೆರಡು ಸಿನಿಮಾ ಗೆದ್ದುಬಿಟ್ರೆ ಹಾರಾಡುವ ನಟರ ನಡುವೆ ತಲೈವಾ ಪ್ರತ್ಯೇಕವಾಗಿ ನಿಲ್ಲುತ್ತಾರೆ. ತಾನೊಬ್ಬ ಸ್ಟಾರ್ ಎನ್ನುವ ಅಮಲು ಅವರ ತಲೆಗೆ ಹತ್ತೇ ಇಲ್ಲ. ಇವತ್ತಿಗೂ ನಿರ್ದೇಶಕರ ನಟನಾಗಿಯೇ ಉಳಿದುಬಿಟ್ಟಿದ್ದಾರೆ. 'ಜೈಲರ್'-2 ಚಿತ್ರದಲ್ಲಿ ಕೂಡ ಅದು ಗೊತ್ತಾಗುತ್ತೆ.
ನೆಲ್ಸನ್ ನಿರ್ದೇಶನದ 'ಜೈಲರ್'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ವಯಸ್ಸು 70 ದಾಟಿದ್ರು, ತಮ್ಮ ಸ್ಟೈಲ್ ಮ್ಯಾನರಿಸಂ ಮೂಲಕವೇ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ರಜನಿಕಾಂತ್ ಸೆಳೆಯುತ್ತಿದ್ದಾರೆ. ನಿರ್ದೇಶಕರಿಗೆ ತಮ್ಮನ್ನು ತಾವು ಒಪ್ಪಿಸಿಕೊಂಡು ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಉಳಿದುಬಿಟ್ಟಿದ್ದಾರೆ. ಹೌದು, ಈ ಚಿತ್ರದಲ್ಲಿ ಮುದುಕನಾಗಿ ತಮ್ಮ ವಯಸ್ಸಿಗೆ ತಕ್ಕ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ತಲೈವಾ ಮನಸ್ಸು ಮಾಡಿದ್ದರೆ ತಮಗೆ ಬೇಕಾದಂತೆ ಕಥೆ ಬರೆಸಿಕೊಂಡು ತಮಗೆ ಬೇಕಾದಂತೆ ಪಾತ್ರ ಬದಲಿಸಿಕೊಂಡು ನಟಿಸಬಹುದು. ಆದರೆ ಅವರು ನಿರ್ದೇಶಕರ ಕಥೆಗೆ ಶರಣಾಗಿದ್ದಾರೆ.
ನಿರ್ದೇಶಕ ನೆಲ್ಸನ್ ಹೇಳಿದ್ದನ್ನೆಲ್ಲಾ ಕೇಳಿ ಆ ಪಾತ್ರದಲ್ಲಿ ಜೀವಿಸಿಬಿಟ್ಟಿದ್ದಾರೆ. ಎಲ್ಲಾ ಸ್ಟಾರ್ ನಟರು ಅದಕ್ಕೆ ಒಪ್ಪುವುದಿಲ್ಲ. ಕೆಲ ಸನ್ನಿವೇಶಗಳಲ್ಲಿ ನಟಿಸೋಕೆ ಒಪ್ಪದೇ ತಾವೇ ಅದನ್ನು ಬದಲಿಸುವುದು ಇದೆ. ನಾನು ಇಷ್ಟು ಕೆಳಮಟ್ಟಕ್ಕೆ ಇಳಿಯುವುದಿಲ್ಲ, ನನ್ನನ್ನು ಬೈಯ್ಯುವ, ಹೊಡೆಯುವ ಸನ್ನಿವೇಶ ಬೇಡ ಎನ್ನುತ್ತಾರೆ. ಆದರೆ ರಜನಿಕಾಂತ್ ಯಾವುದಕ್ಕೂ ಬೇಡ ಎನ್ನದೇ ಈ ದೃಶ್ಯಕ್ಕೆ ಅವಶ್ಯಕತೆ ಇದ್ರೆ ಕಂಡಿತ ಮಾಡ್ತೀನಿ ಎಂದು ತಮ್ಮನ್ನು ಒಪ್ಪಿಸಿಕೊಂಡುಬಿಟ್ಟಿದ್ದಾರೆ. 'ಜೈಲರ್'-2 ಚಿತ್ರದ ಈ ದೃಶ್ಯಗಳಲ್ಲಿ ಅದು ಗೊತ್ತಾಗುತ್ತದೆ.
ಅದೇನೊ ಗೊತ್ತಿಲ್ಲ ರಜನಿಕಾಂತ್ ಹಾಗೂ ನೆಲ್ಸನ್ ನಡುವೆ ಆತ್ಮೀಯ ಒಡನಾಟ ಬೆಳೆದುಬಿಟ್ಟಿದೆ. ತಲೈವಾ ಜೊತೆ ಯಾವುದೇ ಭಯವಿಲ್ಲದೇ ಮಾತನಾಡುತ್ತಾರೆ. ಬೇಕಾದ ಪ್ರಶ್ನೆಗಳನ್ನು ಕೇಳುತ್ತಾರೆ. ಅದೇ ರೀತಿ ಇಂತಹ ದೃಶ್ಯಗಳಲ್ಲಿ ಕೂಡ ರಜನಿಕಾಂತ್ ಅವರನ್ನು ನೋಡಬಹುದಾ ಎನ್ನುವಂತಹ ರೀತಿ ನಟಿಸೋಕೆ ಒಪ್ಪಿಸಿಬಿಟ್ಟಿದ್ದಾರೆ. 'ಜೈಲರ್'-2 ಚಿತ್ರದ ಫಸ್ಟ್ಹಾಫ್ನಲ್ಲಿ ಸಾಕಷ್ಟು ಫನ್ ಇದೆ. ಮೂರ್ತಿ(ನಮೋ ನಾರಾಯಣ) ಬಳಿ ಮುತ್ತುವೇಲ್ ಡ್ರೈವರ್ ಆಗಿ ಕೆಲಸ ಆಗಿ ಕೆಲಸ ಮಾಡುವ ಸನ್ನಿವೇಶಗಳಿವೆ.
ಒಂದು ದೃಶ್ಯದಲ್ಲಿ ಕಾರಿನಲ್ಲಿ ಪಕ್ಕ ಕುಳಿತ ಮುತ್ತುವೇಲ್(ರಜನಿಕಾಂತ್) ಕೆನ್ನೆಯನ್ನು ಮೂರ್ತಿ ಗಿಂಡಿ ಕುಚೇಷ್ಟೆ ಮಾಡುವುದನ್ನು ನೋಡಬಹುದು. ಇದು ಅಂತಹ ಗಂಭೀರ ಸನ್ನಿವೇಶ ಅಲ್ಲ. ಅಷ್ಟೇನು ಅವಶ್ಯಕತೆ ಕೂಡ ಇರಲಿಲ್ಲ. ಆದರೆ ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತೆ. ಆದರೆ ಅದನ್ನು ಒಪ್ಪಿ ನಟಿಸೋಕೆ ರಜನಿಕಾಂತ್ ಒಪ್ಪಿರುವುದು ವಿಶೇಷ. ಅದೇ ರೀತಿ ಕಾಂತ ಕಲ್ಪಕ್ ಆಗಿ ವಿದ್ಯಾಬಾಲನ್ ನೆಗೆಟಿವ್ ರೋಲ್ನಲ್ಲಿ ನಟಿಸಿದ್ದಾರೆ. ಸನ್ನಿವೇಶವೊಂದರಲ್ಲಿ ಆಕೆ ಸಿಗರೇಟ್ ಸೇರಿ ರಜನಿಕಾಂತ್ ಮುಖಕ್ಕೆ ಹೊಗೆ ಬಿಡುವ ಸನ್ನಿವೇಶ ಇದೆ. ಅದನ್ನು ಕೂಡ ತಲೈವಾ ಒಪ್ಪಿ ನಟಿಸಿದ್ದಾರೆ.
ವಿಲನ್ ಬೋದಿ ಕಲ್ಪಕ್ ಆಗಿ ಎಸ್.ಜೆ ಸೂರ್ಯ ನಟಿಸಿದ್ದಾರೆ. ಸನ್ನಿವೇಶವೊಂದರಲ್ಲಿ ರನಿಕಾಂತ್ ಅವರನ್ನು ಹೊಡೆದು ಕೆಳಗೆ ತಳ್ಳಿ ಎದೆ ಮೇಲೆ ಕಾಲಿಟ್ಟು ತುಳಿದು ಕೊನೆಗೆ ಕುತ್ತಿಗೆ ಮೇಲೆ ಕಾಲಿಟ್ಟು ತುಳಿಯುವುದನ್ನು ನೋಡಬಹುದು. ಒಂದೆರಡು ಕ್ಷಣಗಳ ದೃಶ್ಯ ಇದಲ್ಲ, ಒಂದು ನಿಮಿಷದ ದೃಶ್ಯ ಇದು. ಯಾವುದೇ ಬದಲಾವಣೆ ಇಲ್ಲದೇ ಸನ್ನಿವೇಶಕ್ಕೆ ಬೇಕು ಎಂದಾಗ ರಜನಿಕಾಂತ್ ಒಪ್ಪಿ ನಟಿಸಿದ್ದಾರೆ. ಇಂತಹ ದೃಶ್ಯಗಳಲ್ಲಿ ನಟಿಸೋಕೆ ಸಾಮಾನ್ಯವಾಗಿ ಸ್ಟಾರ್ ನಟರು ಒಪ್ಪುವುದಿಲ್ಲ. ನಿರ್ದೇಶಕರಿಗೆ ಹೇಳಿ ಅದನ್ನು ಬದಲಿಸಿಬಿಡ್ತಾರೆ. ದಶಕಗಳಿಂದ ಕೂಡ ಇದು ನಡೆದುಬಂದಿದೆ. ಆದರೆ ಡಾ. ರಾಜ್ಕುಮಾರ್, ಶಿವಣ್ಣ ರೀತಿಯ ಕೆಲ ನಟರು ಇದನ್ನು ಒಪ್ಪಿಕೊಳ್ಳುತ್ತಾರೆ.
'ಸಾಕುಮಗಳು' ಚಿತ್ರದಲ್ಲಿ ಡಾ. ರಾಜ್ಕುಮಾರ್ ಸಹನಟಿಯ ಕಾಲಿಗೆ ಬೀಳುವ ಸನ್ನಿವೇಶ ಇದೆ. ಆ ದೃಶ್ಯ ಬೇಕು ಅಂದಾಗ ಮರು ಮಾತನಾಡದೇ ಅಣ್ಣಾವ್ರು ನಟಿಸಿದ್ದರು. ಅದೇ ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಲಾಗಿತ್ತು. ಡಾ. ರಾಜ್ ಮಾಡಿದ್ದ ಪಾತ್ರವನ್ನು ಎನ್ಟಿಆರ್ ಮಾಡಿದ್ದರು. ಆ ದೃಶ್ಯ ಮಾಡೋಕೆ ರಾಮಾರಾವು ನಿರಾಕರಿಸಿದ್ದರಂತೆ. ರಾಜ್ಕುಮಾರ್ ಮಾಡಿದ್ದಾರೆ ನೀವು ಮಾಡಿದ್ರೆ ಚೆನ್ನಾಗಿರುತ್ತೆ ಅಂದಾಗ "ಹೌದಾ.. ರಾಜ್ಕುಮಾರ್ ಆ ದೃಶ್ಯದಲ್ಲಿ ನಟಿಸಿದ್ರಾ? ಅವ್ರು ಗ್ರೇಟ್ ಬಿಡಿ, ನಾನು ಗ್ರೇಟ್ ಅಲ್ಲ" ಎಂದು ಎನ್ಟಿಆರ್ ಹೇಳಿಬಿಟ್ಟಿದ್ದರಂತೆ.
ಹೀಗೆ ಆ ಕಾಲದಿಂದಲೂ ಸ್ಟಾರ್ ನಟ-ನಟಿಯರು ಕೆಲ ದೃಶ್ಯಗಳಿಗೆ ನೋ ಎನ್ನುತ್ತಾರೆ. ಆದರೆ ರಜನಿಕಾಂತ್ ಮಾತ್ರ ಕಥೆಗೆ ಬೇಕು ಅಂದ್ರೆ ಮರುಮಾತನಾಡದೇ ನಟಿಸುತ್ತಾರೆ. ಅದಕ್ಕೆ ಅವರನ್ನು ಸೂಪರ್ ಸ್ಟಾರ್ ಎನ್ನುವುದು. "ನೋಡಿ ನಾನು ಎಷ್ಟೆ ದೊಡ್ಡ ನಟ ಆಗಿದ್ರು, ಮೊದಲು ಬಸ್ ಕಂಡೆಕ್ಟರ್.. ಕಂಡಿತ ನಟನೆ ಅಂದ್ರೆ ಬಹಳ ಇಷ್ಟ. ಆದ್ರೆ ಅದಕ್ಕಿಂತಲೂ ಹೆಚ್ಚು ಕಂಡೆಕ್ಟರ್ ಕೆಲಸ ಇಷ್ಟಪಟ್ಟಿದ್ದೆ.. ನಾನು ಬಸ್ ಕಂಡೆಕ್ಟರ್ ಎನ್ನುವುದು ಮನಸ್ಸಿನಲ್ಲಿ ಆಳವಾಗಿ ಕೂತುಬಿಟ್ಟಿದೆ. ಹಾಗಾಗಿ ನಾನು ರಜನಿಕಾಂತ್, ಸೂಪರ್ ಸ್ಟಾರ್ ಎನ್ನುವುದನ್ನು ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ" ಎಂದು ಸ್ವತಃ ರಜನಿಕಾಂತ್ ಇತ್ತೀಚೆಗೆ ಹೇಳಿದ್ದರು.