ನಟಸಾರ್ವಭೌಮ ಡಾ. ರಾಜ್‌ಕುಮಾರ್ ಮಾಡದ ಪಾತ್ರಗಳಿಲ್ಲ. ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ, ಸಾಮಾಜಿಕ, ಬಾಂಡ್ ಹೀಗೆ ನಾನಾ ಶೈಲಿಯ ಸಿನಿಮಾಗಳಲ್ಲಿ ಅಣ್ಣಾವ್ರ ನಟನೆಗೆ ಸಾಟಿಯಿಲ್ಲ. ಶಿವಾಜಿ, ಎನ್‌ಟಿಆರ್, ನಾಗೇಶ್ವರರಾವ್ ಕೂಡ ಡಾ. ರಾಜ್ ನಟನೆಗೆ ಅಭಿಮಾನಿಗಳಾಗಿಬಿಟ್ಟಿದ್ದರು. ತೆಲುಗಿನಲ್ಲಿ 'ಅನ್ನಮಯ್ಯ' ಸಿನಿಮಾ ಮಾಡಿ ನಾಗಾರ್ಜುನ ಯಶಸ್ಸು ಕಂಡಿದ್ದರು.
'ಅನ್ನಮಯ್ಯ' ಸಿನಿಮಾ ಮಾಡೋಕು ಮುನ್ನ ಡಾ. ರಾಜ್‌ಕುಮಾರ್ ನಟನೆಯ 'ಭಕ್ತಕುಂಬಾರ' ಸಿನಿಮಾ ಒಮ್ಮೆ ನೋಡು ಎಂದು ನಾಗಾರ್ಜುನಗೆ ತಂದೆ ನಾಗೇಶ್ವರರಾವ್ ಸಲಹೆ ನೀಡಿದ್ದರಂತೆ.. ಅಣ್ಣಾವ್ರ ಒಡನಾಡಿಯಾಗಿದ್ದ ಗ್ರೀನ್‌ಹೌಸ್ ವಾಸು ಈ ವಿಚಾರವನ್ನು ಟಿವಿ5 ವಾಹಿನಿ ಸಂದರ್ಶನದಲ್ಲಿ ಹೇಳಿದ್ದಾರೆ. ಅಣ್ಣಾವ್ರ ನಟನೆ, ಛಾರ್ಮ್ ಬಗ್ಗೆ ಎಎನ್‌ಆರ್ ಬಹಳ ಅಭಿಮಾನ ಇಟ್ಟುಕೊಂಡಿದ್ದರು. ಅದ್ರಲ್ಲೂ ಮುತ್ತುರಾಜನ ಪೌರಾಣಿಕ, ಐತಿಹಾಸಿಕ ಸಿನಿಮಾಗಳನ್ನು ನೋಡಿ ಬೆರಗಾಗಿದ್ದರು.
ಕೆ. ರಾಘವೇಂದ್ರ ರಾವ್ ನಿರ್ದೇಶನದಲ್ಲಿ ಬಂದಿದ್ದ 'ಅನ್ನಮಯ್ಯ' ಸಿನಿಮಾ ಹಿಟ್ ಆಗಿತ್ತು. ಅಲ್ಲಿಯವರೆಗೂ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ನಾಗಾರ್ಜುನ್ ಭಕ್ತಿಪ್ರಧಾನ ಸಿನಿಮಾ ಮಾಡ್ತಾರೆ ಅಂದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಸ್ವತಃ ತಂದೆ ಎಎನ್‌ಆರ್ ಕೂಡ ಬೆರಗಾಗಿದ್ದರು. ಆದರೂ ಬೇಡ ಎನ್ನಲಿಲ್ಲ. ಬದಲಿಗೆ 'ಭಕ್ತಕುಂಬಾರ' ಸಿನಿಮಾ ನೋಡೋಕೆ ಹೇಳಿದ್ರಂತೆ.. ಆ ಸಿನಿಮಾ ವಿಸಿಡಿ ಕ್ಯಾಸೆಟ್ ಹಾಕ್ಕೊಂಡು ಸಿನ್ಮಾ ನೋಡು, ಅದರಿಂದ ಏನೇನು ಕಲಿಯೋಕೆ ಸಾಧ್ಯ, ಅಳವಡಿಸಿಕೊಳ್ಳೋಕೆ ಸಾಧ್ಯ, ಅದನ್ನು ಅಳವಡಿಸಿಕೋ ಎಂದು ಹೇಳಿದ್ದರಂತೆ.. ಈ ವಿಚಾರವನ್ನು ವಾಸು ಹಂಚಿಕೊಂಡಿದ್ದಾರೆ.
ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ 'ಭಕ್ತಕುಂಬಾರ' ಸಿನಿಮಾ 1974ರಲ್ಲಿ ತೆರೆಗೆ ಬಂದಿತ್ತು. ವಿಠ್ಠಲನ ಭಕ್ತ ಗೋರನ ಪಾತ್ರದಲ್ಲಿ ಅಣ್ಣಾವ್ರ ನಟನೆ ಮರೆಯೋಕೆ ಸಾಧ್ಯವಿಲ್ಲ. 1977ರಲ್ಲಿ ಸ್ವತಃ ನಾಗೇಶ್ವರ ರಾವ್ ಈ ಸಿನಿಮಾ ರೀಮೆಕ್ ಮಾಡಿದ್ದರು. ಆದರೆ ಅಣ್ಣಾವ್ರ ಮಟ್ಟಕ್ಕೆ ಆ ಪಾತ್ರವನ್ನು ನಿಭಾಯಿಸೋಕೆ ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೋ ಏನೋ ಮಗನಿಗೆ 'ಭಕ್ತಕುಂಬಾರ' ಸಿನಿಮಾ ನೋಡುವಂತೆ ಹೇಳಿದ್ದರು ಅನ್ನಿಸುತ್ತದೆ.
ಕಾರ್ಯಕ್ರಮವೊಂದರಲ್ಲಿ ಅಣ್ಣಾವ್ರು- ನಾಗೇಶ್ವರರಾವ್ ವೇದಿಕೆಯಲ್ಲಿದ್ದರು. ನನಗೆ ಡಾ. ರಾಜ್ ನೋಡಿದ್ರೆ ಹೊಟ್ಟೆ ಉರಿ ಆಗುತ್ತೆ. ಇವತ್ತಿಗೂ ಹೊಸ ಮದುಮಗನಂತೆ ರಾಜ್‌ಕುಮಾರ್ ಕಾಣಿಸ್ತಾರೆ. ನಾವು ನೋಡಿದ್ರೆ ವಯಸ್ಸಾದವರಂತೆ ಕೂದಲು ಉದುರಿ ಹೋಗಿದೆ ಎಂದು ನಾಗೇಶ್ವರರಾವ್ ತಮಾಷೆ ಮಾಡಿದ್ದನ್ನು ಗ್ರೀನ್ ಹೌಸ್ ವಾಸು ನೆನಪಿಸಿಕೊಂಡಿದ್ದಾರೆ.