ಕನ್ನಡ ಜೊತೆಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಈ ಬಾರಿ ಬಿಗ್‌ಬಾಸ್ ಹೊಸ ಸೀಸನ್ ಆರಂಭವಾಗಿದೆ. ತೆಲುಗಿನಲ್ಲಿ 10ನೇ ಸೀಸನ್ ನಡೀತಿದೆ. ಮತ್ತೊಂದು ನಟ ನಾಗಾರ್ಜುನ ಶೋ ನಿರೂಪಣೆ ಮಾಡುತ್ತಿದ್ದಾರೆ. ತಪ್ಪು ಮಾಡುವ ಸ್ಪರ್ಧಿಗಳಿಗೆ ತಮ್ಮದೇ ಶೈಲಿಯಲ್ಲಿ ಬಿಸಿ ಮುಟ್ಟಿಸುತ್ತಿದ್ದಾರೆ. ಮೊದಲ ವಾರದ ಪಂಚಾಯ್ತಿಯಲ್ಲಿ ಮನೆ ಕೆಲಸ ಮಾಡದೇ ಅಧಿಕಪ್ರಸಂಗ ತೋರಿಸುವವರಿಗೆ ನಾಗ್ ಚಾಟಿ ಬೀಸಿದ್ದಾರೆ.

ಮೂವರು ಸ್ಪರ್ಧಿಗಳು ಮಿಲ್ಕ್ ಶೇಕ್ ಕುಡಿದ ಲೋಟಗಳನ್ನು ವೇದಿಕೆಯಲ್ಲೇ ನಾಗಾರ್ಜುನ ತೊಳೆದಿದ್ದಾರೆ. ಇತರೆ ಸ್ಪರ್ಧಿಗಳ ಎಂಜಲು ಪಾತ್ರೆ, ಲೋಟ ತೊಳೆಯುವುದಿಲ್ಲ ಎಂದು ವಾದಿಸಿದ ಸ್ಪರ್ಧಿಗಳಿಗೆ ಈ ಮೂಲಕ ಕಿವಿ ಹಿಂಡಿದ್ದಾರೆ. ನಾನೇ ನಿಮ್ಮ ಎಂಜಲು ಲೋಟಗಳನ್ನು ತೊಳೆದಿದ್ದೇನೆ. ಏನಾಯ್ತು ಈಗ, ಪಾತ್ರೆ ತೊಳೆಯುವುದು ನಿಮ್ಮ ಕೆಲಸ ಅಂದಮೇಲೆ ತೊಳೆಯಲೇ ಬೇಕು ಎಂದು ತಿರುಗೇಟು ನೀಡಿದ್ದಾರೆ. ಆ ಪ್ರೋಮೊ ಸಖತ್ ವೈರಲ್ ಆಗ್ತಿದೆ.

ತೆಲುಗು ಬಿಗ್‌ಬಾಸ್ ಶೋನಲ್ಲಿ ಈ ಬಾರಿ ಕೂಡ ಸೆಲೆಬ್ರೆಟಿಗಳು ಹಾಗೂ ಕಾಮನ್‌ಮ್ಯಾನ್‌ಗಳು ಮನೆ ಒಳಗೆ ಹೋಗಿದ್ದಾರೆ. ಇನ್ನು ವೀಕೆಂಡ್ ಪಂಚಾಯ್ತಿ ವೇಳೆ ನಾಗಾರ್ಜುನ ಮೂವರು ಸ್ಪರ್ಧಿಗಳನ್ನು ಗಾರ್ಡನ್ ಏರಿಯಾಗೆ ಕರೆದಿದ್ದಾರೆ. ಅವರಿಗೆ ಮಿಲ್ಕ್ ಶೇಕ್ ಕೊಟ್ಟು ಕುಡಿಯೋಕೆ ಹೇಳಿದ್ದಾರೆ. ಬಳಿಕ ಆ ಎಂಜಲು ಲೋಟಗಳನ್ನು ವೇದಿಕೆಗೆ ತರಿಸಿದ್ದಾರೆ. ಸ್ವತಃ ನಾಗಾರ್ಜುನಾ ಆ ಎಂಜಲು ಗಾಜಿನ ಲೋಟಗಳನ್ನು ವೇದಿಕೆಯಲ್ಲಿ ತೊಳೆದಿದ್ದಾರೆ. ಇದನ್ನು ನೋಡಿ ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದರು. ಅಷ್ಟರಲ್ಲೇ ಕೆಲವರಿಗೆ ಕಾರಣ ಗೊತ್ತಾಗಿ ಹೋಗಿತ್ತು.

ನಾಗಾರ್ಜುನ ನಡೆ ನೋಡಿ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ಯಾವುದೇ ಕೆಲಸ ಸಣ್ಣದಲ್ಲ ಎಂದು ಹೇಳಿ ಸ್ಪರ್ಧಿ ರೋಹಿತ್‌ಗೆ ನಾಗ್ ಕ್ಲಾಸ್ ತಗೊಂಡಿದ್ದಾರೆ. ನಾನು ಎಂಜಲು ಲೋಟ ಮತ್ತು ತಟ್ಟೆಗಳನ್ನು ತೊಳೆದಿದ್ದೇನೆ ಅನ್ನೋದು ಸರಿಯಲ್ಲ. ನಿಮಗೆ ಅಂತಹ ಉದ್ದೇಶವಿದ್ದರೆ ಮನೆಯಲ್ಲಿ ಇರಬೇಡಿ.. ನಿಮ್ಮ ಎಂಜಲು ಲೋಟ, ತಟ್ಟೆ ನಾನು ತೊಳೆಯಬೇಕು ಎನ್ನುವ ಆಲೋಚನೆಯೇ ತಪ್ಪು. ಅದು ನಿಮ್ಮ ಕೆಲಸ ಅನ್ನೋದು ಮರೆಯಬೇಡಿ ಎಂದು ನಾಗಾರ್ಜುನ ತಿವಿದಿದ್ದಾರೆ.

ಮತ್ತೊಬ್ಬ ಸ್ಪರ್ಧಿ ಝಾನ್ಸಿ ಬಳಿ ನಾಗಾರ್ಜುನ ಮಾತನಾಡಿದ್ದಾರೆ. ರೋಹಿತ್ ಹೇಳಿದ್ದು ಏನು ಎಂದು ಕೇಳಿದ್ದಾರೆ. ನೀವು ಎಂಜಲು ಮಾಡಿದ್ದನ್ನು ನಾನು ತೊಳೆಯಬೇಕು ಎಂದು ಆತ ಹೇಳಿದ್ದಾಗಿ ಝಾನ್ಸಿ ಹೇಳಿದ್ದಾರೆ. ಬಳಿಕ ರೋಹಿತ್ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಲು ಹೋದರೂ ನಾಗ್ ಒಪ್ಪಲಿಲ್ಲ. 'ನಿಮ್ಮ ಎಂಜಲು' ಎನ್ನುವ ನಿಮ್ಮ ಆಲೋಚನೆಯೇ ಸರಿಯಲ್ಲ ಎಂದು ಬುದ್ದಿ ಹೇಳಿದ್ದಾರೆ. ಕೊನೆಗೆ ರೋಹಿತ್ ಕ್ಷಮೆ ಕೇಳಿದ್ದಾರೆ.