20 ವಯಸ್ಸಿನ ನಟಿಯ ಜೊತೆ 60 ವರ್ಷದ ನಾಯಕ ರೊಮ್ಯಾನ್ಸ್ ಮಾಡುವುದು ಹೊಸದೇನು ಅಲ್ಲ. ಕೆಲವೊಮ್ಮೆ ಈ ಬಗ್ಗೆ ಚರ್ಚೆ ನಡೆಯುತ್ತೆ. ಆದರೆ ನಾಯಕನಟನನ್ನು ಆರಾಧಿಸುವ ಇಂಡಸ್ಟ್ರಿಯಲ್ಲಿ ಇದೆಲ್ಲಾ ಸರ್ವೇಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಹೀಗೆ ತಮಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವರ ಜೊತೆ ನಟಿಸುವ ನಟಿಯರು ಕೂಡ ಈ ಬಗ್ಗೆ ಮಾತನಾಡಲ್ಲ. ಆದರೆ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇದೇ ವಿಚಾರದ ಬಗ್ಗೆ ಕಾಮೆಂಟ್ ಮಾಡಿ ಟ್ರೋಲ್ ಆಗ್ತಿದ್ದಾರೆ.

ತಮಿಳುನಾಡಿನಲ್ಲಿ ಹುಟ್ಟಿದ್ರು ನಟಿ ರಾಧಿಕಾ ಆಪ್ಟೆ ಸದ್ಯ ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ. ಬಾಲಿವುಡ್ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ದಕ್ಷಿಣದ ಚಿತ್ರರಂಗದ ಬಗ್ಗೆ ಬಾಲಿವುಡ್ ನಟಿಯರು ಕಾಮೆಂಟ್ ಮಾಡುವುದು ಹೊಸತಲ್ಲ. ಆದರೆ ಒಂದ್ಕಾಲದಲ್ಲಿ ತೆಲುಗು ಚಿತ್ರವೊಂದರಲ್ಲಿ ನಟಿಸಿ ಈಗ ಅದೇ ಚಿತ್ರದ ಬಗ್ಗೆ ರಾಧಿಕಾ ಕಾಮೆಂಟ್ ಕೆಲವರ ಬೇಸರಕ್ಕೆ ಕಾರಣವಾಗಿದೆ. ಈ ಚಿತ್ರದಲ್ಲಿ ನಟಿಸುವುದು ನನ್ನ ಅದೃಷ್ಟ ಎಂದು ಹೇಳಿದ್ದ ನಟಿ ಈಗ ಉಲ್ಟಾ ಹೊಡೆದಿರುವುದು ಟಾಲಿವುಡ್ ಮಂದಿ ಆಕ್ರೋಶಕ್ಕೆ ಕಾರಣವಾಗಿದೆ.

ಕೀರ್ತಿ ಸುರೇಶ್ ಹಾಗೂ ರಾಧಿಕಾ ಆಪ್ಟೆ ನಟನೆಯ 'ಅಕ್ಕ' ವೆಬ್ ಸೀರಿಸ್ ರಿಲೀಸ್ ಆಗಿದೆ. ಇದರ ಪ್ರಮೋಷನ್ ಭಾಗವಾಗಿ ಇಬ್ಬರು ಸಂದರ್ಶನಗಳಲ್ಲಿ ಭಾಗಿ ಆಗ್ತಿದ್ದಾರೆ. "ಒಂದು ತೆಲುಗು ಚಿತ್ರದಲ್ಲಿ ನಟಿಸಿದ್ದೆ. ನನ್ನ ಮಾವನನ್ನೇ ಮದುವೆ ಆಗುವಂತ ಸನ್ನಿವೇಶ ಇತ್ತು. ಅದು ನಿಜಕ್ಕೂ ಬಹಳ ಚಾಲೆಂಜಿಂಗ್ ಆಗಿತ್ತು, ಅಷ್ಟೆ ಕಷ್ಟವಾಗಿತ್ತು" ಎಂದಿದ್ದಾರೆ. ಕೂಡಲೇ ಕೀರ್ತಿ ಸುರೇಶ್ ಮಾತನಾಡಿ "ದಕ್ಷಿಣದಲ್ಲಿ ಮಾವನನ್ನು ಮದುವೆ ಆಗುವ ರೂಢಿಯಿದೆ" ಎಂದಿದ್ದಾರೆ.

ನನಗಿಂತ ವಯಸ್ಸಿನಲ್ಲಿ ಬಹಳ ದೊಡ್ಡ ನಟನ ಜೊತೆ ರೊಮ್ಯಾನ್ಸ್ ಮಾಡಬೇಕಿತ್ತು. ನಡುವೆ ನಾನು ಸತ್ತು ಹೋಗುವ ಸನ್ನಿವೇಶ ಇದ್ದು ಬಳಿಕ ನನ್ನನ್ನು ಭುಜದ ಮೇಲೆ ಹೊತ್ತುಕೊಂಡು ನಾಯಕ ಆಕ್ಷನ್ ಮಾಡ್ತಾರೆ, ಅದಂತೂ ನಿಜಕ್ಕೂ ಕಷ್ಟ ಕಷ್ಟ ಎಂದು ರಾಧಿಕಾ ಆಪ್ಟೆ ವ್ಯಂಗ್ಯವಾಗಿ ನಕ್ಕಿದ್ದಾರೆ. ಆಕೆ ತೆಲುಗಿನ 'ಲೆಜೆಂಡ್' ಸಿನಿಮಾ ಮಾತನಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇಷ್ಟವಿಲ್ಲದಿದ್ದರೆ ನಟಿಸಬಾರದಿತ್ತು. ಅವಕಾಶಕ್ಕಾಗಿ ಸಂಭಾವನೆಗಾಗಿ ನಟಿಸಿ ಈಗ ವ್ಯಂಗ್ಯವಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.