ಅಶ್ವಥ್ ಮಾರಿಮುತ್ತು ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಧರ್ಮನ್' ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಅರಮನೆ ನಗರಿಯಲ್ಲಿ ಸೂಪರ್ ಸ್ಟಾರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ಕೆಲ ದಿನಗಳ ಕಾಲ ಅಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ತಲೈವಾ ಮಗಳ ಪಾತ್ರದಲ್ಲಿ ರಾಶಿಕ ಖನ್ನಾ ನಟಿಸುತ್ತಿದ್ದಾರೆ.

ಕಮಲ್ ಹಾಸನ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು ಅನಿರುದ್ಧ್ ರವಿಚಂದರ್ ಟ್ಯೂನ್ ಹಾಕುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಧರ್ಮನ್ ಸಿನಿಮಾ ಚಿತ್ರೀಕರಣ ನಡೀತಿದೆ. ಚಿತ್ರದಲ್ಲಿ ವೈದ್ಯನ ಪಾತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಅವರನ್ನು ಸ್ಟೈಲಿಶ್ ಅವತಾರದಲ್ಲಿ ತೋರಿಸುವ ಪ್ರಯತ್ನ ನಡೀತಿದೆ. ತೆಲುಗು ನಟ ರಾಮ್‌ ಪೊತಿನೇತಿ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ. ರಾಮ್ ಹಾಗೂ ರಾಶಿ ಕೂಡ ಮೈಸೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

ಅಂದಹಾಗೆ ಚಿತ್ರದಲ್ಲಿ ರಾಮ್ ಪೊತಿನೇನಿ ನಟಿಸುತ್ತಿರುವ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡಿಲ್ಲ. ಆದರೆ ರಜನಿಕಾಂತ್ ಹಾಗೂ ರಾಮ್ ಜೊತೆ ವರ್ಕ್‌ ಮಾಡಿದೆ ಎಂದು ಇಬ್ಬರ ಜೊತೆಗೆ ಕ್ಲಿಕ್ಕಿಸಿದ ಫೋಟೊವನ್ನು ರಾಶಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಕೆಲವೇ ನಿಮಿಷಗಳಲ್ಲಿ ಪೋಸ್ಟ್ ವೈರಲ್ ಆಗಿತ್ತು. ಬಳಿಕ ಆಕೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಅಧಿಕೃತವಾಗಿ ರಾಮ್ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಹೇಳುವ ಮುನ್ನ ವಿಷಯ ರಾಶಿ ಲೀಕ್ ಮಾಡಿಬಿಟ್ಟರು. ಅದಕ್ಕೆ ಚಿತ್ರತಂಡದ ಸೂಚನೆ ಮೇರೆಗೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಆದರೂ ಅದಾಗಲೇ ಫೋಟೊ ವೈರಲ್ ಆಗಿಬಿಟ್ಟಿತ್ತು.

ಇತ್ತೀಚೆಗೆ ಇಂತಹ ವಿಷಯದಲ್ಲಿ ಚಿತ್ರತಂಡಗಳು ಬಹಳ ಎಚ್ಚರಿಕೆ ವಹಿಸುತ್ತಾರೆ. ಕಲಾವಿದರು, ತಂತ್ರಜ್ಞರು ಗುಟ್ಟು ಕಾಪಾಡಿಕೊಳ್ಳುವಂತೆ ಸೂಚನೆ ಕೊಡುತ್ತಾರೆ. ಇದೇ ಕಾರಣಕ್ಕೆ ಸೆಟ್‌ಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗದಂತೆ ತಾಕೀತು ಮಾಡ್ತಾರೆ. ಆದರೆ ರಾಶಿ ಬಹಳ ಎಕ್ಸೈಟ್ ಆಗಿ ಪೋಸ್ಟ್ ಮಾಡಿಬಿಟ್ಟಿದ್ದಾರೆ ಎನ್ನಲಾಗ್ತಿದೆ.

ದೆಹಲಿ ಬೆಡಗಿ ರಾಶಿ ಖನ್ನಾ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದ, ಅಭಿನಯ ಎಲ್ಲಾ ಇದ್ದರೂ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಇದೀಗ 'ಧರ್ಮನ್' ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಸೋ ಸುವರ್ಣಾವಕಾಶ ತಮ್ಮದಾಗಿಸಿಕೊಂಡಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.