'ಟಾಕ್ಸಿಕ್' ಸಿನಿಮಾ ಹವಾ ಇನ್ನು ಕಮ್ಮಿ ಆಗಿಲ್ಲ. ದೀಪಾವಳಿಗೆ 'ರಾಮಾಯಣ' ಸಿನಿಮಾ ಮೂಲಕ ಯಶ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಆ ಸಿನಿಮಾ ಕೆಲಸಗಳು ಮುಗಿದಿದೆ. ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆಗೆಗೆ ಬರ್ತಿದೆ. ಹಾಗಾಗಿ ಎರಡನೇ ಭಾಗದ ಚಿತ್ರೀಕರಣದಲ್ಲಿ ಯಶ್ ಭಾಗಿ ಆಗಬೇಕಿದೆ. ಆ ಬಳಿಕ ಅವರ ಮುಂದಿನ ಸಿನಿಮಾ ಯಾವ್ದು ಎನ್ನುವ ಪ್ರಶ್ನೆ ಎದ್ದಿದೆ.
ಈಗಾಗಲೇ ಸಾಕಷ್ಟು ಕಥೆಗಳನ್ನು ಯಶ್ ಕೇಳಿದ್ದಾರೆ. ಕೆಲ ನಿರ್ದೇಶಕರು ರಾಕಿಂಗ್ ಸ್ಟಾರ್ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ತಮಿಳು ನಿರ್ದೇಶನ ಪಿ. ಎಸ್ ಮಿತ್ರನ್ ಕೂಡ ಯಶ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಚರ್ಚೆ ನಡೆಸಿದ್ದಾರೆ. ಅವರು ನಿರ್ದೇಶನ ಮಾಡಿರುವ 'ಸರ್ದಾರ್- 2' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಸೂರ್ಯ ಸಹೋದರ ಕಾರ್ತಿ ಹೀರೊ ಆಗಿ ನಟಿಸಿರುವ ಸಿನಿಮಾ ಇದು. ಆಶಿಕಾ ರಂಗನಾಥ್ ನಾಯಕಿಯಾಗಿ ಮಿಂಚಿದ್ದಾರೆ.
'ಸರ್ದಾರ್- 2' ಸಿನಿಮಾ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಮಿತ್ರನ್ ಭಾಗಿ ಆಗುತ್ತಿದ್ದಾರೆ. ಇದೇ ವೇಳೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಧನುಷ್ ಹಾಗೂ ಯಶ್ ಇಬ್ಬರಿಗೂ ಕಥೆಗಳನ್ನು ಹೇಳಿರುವುದಾಗಿ ಅವರು ತಿಳಿಸಿದ್ದಾರೆ. "ಯಶ್ ಸರ್‌ಗೆ ಒಂದು ಕಥೆ ಹೇಳಿದ್ದೀನಿ. ಅದು ನನ್ನ ಮಹತ್ವಾಕಾಂಕ್ಷೆಯ ಸಿನಿಮಾ. ಇಂಡಿಯಾನಾ ಜೋನ್ಸ್ ರೀತಿಯ ಸಾಹಸಮಯ ಕಥೆ ಅದು. ಸ್ಟ್ರಾಂಗ್ ಎಮೋಷನ್ ಅಂಶಗಳು ಇವೆ. ಅಂತಾದೊಂದು ಸಿನಿಮಾ ಸಾಧ್ಯವಾದರೆ ಅದ್ಭುತವಾಗಿರುತ್ತೆ. ಅದು ನನ್ನ ಡ್ರೀಮ್ ಪ್ರಾಜೆಕ್ಟ್" ಎಂದು ಹೇಳಿರುವುದು ವೈರಲ್ ಆಗ್ತಿದೆ.
'ಇರುಂಬು ತಿರೈ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾ ಮೂಲಕ ಮಿತ್ರನ್ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಬಳಿಕ 'ಹೀರೊ' ಹಾಗೂ 'ಸರ್ದಾರ್' ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದರು. 'ಸರ್ದಾರ್- 2' ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.