ಎ. ಪಿ ಅರ್ಜುನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಹೀನಾಯವಾಗಿ ಸೋತಿತ್ತು. ಉದಯ್ ಕೆ ಮೆಹ್ತಾ ನಿರ್ಮಾಣದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ತೆರೆಮೇಲೆ ನಿರಾಸೆ ಮೂಡಿಸಿತ್ತು. ದೊಡ್ಡಮಟ್ಟದಲ್ಲಿ ನಷ್ಟ ಅನುಭವಿಸಿತು. ಈ ಬಗ್ಗೆ ಡೈಲಿ ಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ನಿರ್ಮಾಪಕ ಉದಯ್ ಕೆ ಮೆಹ್ತಾ ಮಾತನಾಡಿದ್ದಾರೆ.
30 ಕೋಟಿಲಿ ಶುರುವಾದ 'ಮಾರ್ಟಿನ್' ಸಿನ್ಮಾ ಎಲ್ಲೋ ಹೋಗ್ಬಿಡ್ತು. ಮೊದ್ಲೆ ಗೊತ್ತಿದ್ರೆ ಯಾರು ಅಂತಹ ಸಾಹಸ ಮಾಡಲ್ಲ. ಮಾಡ್ತಾ ಮಾಡ್ತಾ ಬಜೆಟ್ ಜಾಸ್ತಿ ಆಗ್ತಾ ಹೋಯ್ತು. ಸಣ್ಣ ಸಿನ್ಮಾ ಮಾಡಿ ಗೆದ್ದಿದ್ದೆವು. ದೊಡ್ಡ ಸಿನಿಮಾ ಮಾಡುವಾಗ ಯೋಚಿಸಬೇಕಿತ್ತು. 2017ರಲ್ಲೇ ಧ್ರುವಗೆ ಅಡ್ವಾನ್ಸ್ ಕೊಟ್ಟಿದ್ದೆ. 'ದುಬಾರಿ' ಎಂಬ ಸಿನಿಮಾ ಮಾಡಲು ಮುಹೂರ್ತ ಆಗಿತ್ತು. ಕಾರಣಾಂತರಗಳಿಂದ ಅದು ನಿಂತು ಹೋಗಿ ಬಳಿಕ 'ಮಾರ್ಟಿನ್' ಸಿನಿಮಾ ಮಾಡುವಂತಾಯಿತು ಎಂದಿದ್ದಾರೆ.
ಮಾತು ಮುಂದುವರೆಸಿರುವ ಉದಯ್ ಕೆ ಮೆಹ್ತಾ "ಸಿನ್ಮಾ ಬಿಡುಗಡೆ ಹೊತ್ತಲ್ಲಿ ಖಾಸಗಿ ವಾಹಿನಿಯಲ್ಲಿ ಒಂದು ಸಂದರ್ಶನ ಮಾಡಿದ್ರು. ಅನಗತ್ಯ ಪ್ರಶ್ನೆಗಳನ್ನು ಕೇಳಿದ್ರು.. ಅದಕ್ಕೆ ನಮ್ಮ ನಾಯಕ ನಟ ಏನೋ ಉತ್ತರ ಕೊಟ್ಟು.. ತಪ್ಪು ಕಲ್ಪನೆ ಬರುತ್ತೆ.. ತುಂಬಾ ದೊಡ್ಡ ನಟನ ಫ್ಯಾನ್ಸ್ ನಮ್ಮ ಸಿನಿಮಾ ವಿರುದ್ಧ ಬರ್ತಾರೆ. ಅದು ಬಹಳ ದೊಡ್ಡ ಎಫೆಕ್ಟ್ ಆಗಿ ನೆಗೆಟಿವ್ ಹಬ್ಬಿಸ್ತಾರೆ. ಮಾರ್ನಿಂಗ್ ಶೋಗೆ ಸಿನಿಮಾವನ್ನು ಮುಗಿಸ್ತಾರೆ. ಒಬ್ಬರ ಹೇಳಿಕೆಯಿಂದ ನಿರ್ಮಾಪಕನನ್ನು ಹಾಳು ಮಾಡಬಹುದು ಎನ್ನುವುದಕ್ಕೆ ಇದು ಉದಾಹರಣೆ" ಎಂದು ತಿಳಿಸಿದ್ದಾರೆ.
ಬಳಿಕ ದುನಿಯಾ ವಿಜಯ್ ಫೋನ್ ಮಾಡಿ ಮಾತನಾಡಿದ್ರು. ಧೈರ್ಯವಾಗಿರಿ ಒಟ್ಟಿಗೆ ಸಿನಿಮಾ ಮಾಡೋಣ ಎಂದಿದ್ದಾರೆ. ನಾನು ಕಥೆಗಳನ್ನು ಬರೆಯುತ್ತಿದ್ದೇನೆ. ಅದರಲ್ಲಿ 'ಶ್ರೀರಾಮಚಂದ್ರ' ಎಂಬ ಸಿನಿಮಾ ನಿರ್ಮಾಣವಾಗುತ್ತಿದೆ. 'ಸು ಫ್ರಂ ಸೋ' ಚಿತ್ರ ರವಿಯಣ್ಣ ಖ್ಯಾತಿಯ ಶನೀಲ್ ಗೌತಮ್ ಹೀರೊ ಆಗಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ಮಾಡುವ ಆಲೋಚನೆ ಇದೆ. ಸದ್ಯಕ್ಕೆ ನನ್ನ ನಿರ್ಮಾಣದಲ್ಲಿ ಯಾವುದೇ ಸಿನಿಮಾ ಬರಲ್ಲ ಎಂದು ಉದಯ್ ಕೆ ಮೆಹ್ತಾ ವಿವರಿಸಿದ್ದಾರೆ.