ಗ್ರೇಟರ್ ನೋಯ್ಡಾದಲ್ಲಿ ನಡೆದ ಇಂಡಿಯನ್ ರೇಸಿಂಗ್ ಲೀಗ್ (ಐಆರ್‌ಎಲ್) ಸ್ಪರ್ಧೆಯಲ್ಲಿ ನಟ ಸುದೀಪ್ ಒಡೆತನದ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ತಂಡ ಚಾಂಪಿಯನ್ ಆಗಿದೆ. ರಾಜ್ಯೋತ್ಸವದ ಸಂಭ್ರಮದಲ್ಲೇ ಈ ಸಾಧನೆ ವಿಶೇಷವಾಗಿದೆ. ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ನೋಯ್ಡಾದ ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಅಧಿಕೃತ ಟ್ರೋಫಿ ಪ್ರದಾನ ಮಾಡಿದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ತಂಡದ ಮಾಲಕಿ ಪ್ರಿಯಾ ಸುದೀಪ್ ಪ್ರಶಸ್ತಿ ನೀಡಿದರು. ಅವರು ತೋರಿದ ಕನ್ನಡಾಭಿಮಾನ ಎಲ್ಲರ ಗಮನ ಸೆಳೆಯಿತು. ಗೆಲುವಿನ ಸಂಭ್ರಮದ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪ್ರಿಯಾ ಸುದೀಪ್ ಅವರು ಕನ್ನಡದ ಬಾವುಟದ ಕೆಂಪು ಮತ್ತು ಹಳದಿ ಬಣ್ಣದ ಶಾಲನ್ನು ಪೊಲೀಸ್ ಕಮಿಷನರ್ ಅವರಿಗೆ ನೀಡಿ, ಅದನ್ನು ವಿಜೇತರಿಗೆ ಗೌರವಪೂರ್ವಕವಾಗಿ ಹೊದಿಸುವಂತೆ ಕೋರಿದರು.

ಕನ್ನಡಿಗರು ಎಲ್ಲೆ ಇದ್ದರೂ ತಮ್ಮ ಭಾಷೆ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ಅತ್ಯಂತ ಹೆಮ್ಮೆಯಿಂದ ಆಚರಿಸುವ 'ಕರ್ನಾಟಕ ರಾಜ್ಯೋತ್ಸವ'ದ ಮಹತ್ವ ಹಾಗೂ ಹಿನ್ನೆಲೆ ಪ್ರಿಯಾ ಸುದೀಪ್ ಸಾರಿ ಹೇಳಿದರು. ಪ್ರಶಸ್ತಿ ಪ್ರದಾನ ಪೀಠದ ಮೇಲೆ ನಿಂತ ಐಆರ್‌ಎಲ್ ವಿಜೇತ ರುಹಾನ್ ಆಳ್ವಾ ಅವರು ತಮ್ಮ ಹೆಗಲ ಮೇಲೆ ಕನ್ನಡ ಧ್ವಜದ ಬಣ್ಣದ ಶಾಲನ್ನು ಹೊದ್ದು ನಿಂತ ದೃಶ್ಯ ಗಮನ ಸೆಳೆಯಿತು. ಕನ್ನಡದ ಶಾಲು ಮತ್ತು ಪ್ರೇರಣಾದಾಯಕ ಮಾತುಗಳ ಮೂಲಕ ಪ್ರಿಯಾ ಸುದೀಪ್ ಅವರು ಕ್ರೀಡಾ ವಿಜಯವನ್ನು ಗಡಿಗಳನ್ನು ಮೀರಿ ಕನ್ನಡದ ಸಾರ್ವಭೌಮತೆಯ ಸಂಭ್ರಮವನ್ನಾಗಿ ರೂಪಿಸಿದರು.