ಮನೋಜ್ ಕುಮಾರ್ ನಿರ್ದೇಶನದ 'ಪ್ರೇಮದ ಊರಲಿ' ಸಿನಿಮಾ ತೆರೆಮೇಲೆ ಜಾದೂ ಮಾಡಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಮೌತ್ ಟಾಕ್ ಚೆನ್ನಾಗಿದ್ದು ನಿಧಾನವಾಗಿ ಚಿತ್ರದ ಶೋಗಳ ಸಂಖ್ಯೆ ಹೆಚ್ಚಿಸಲಾಗ್ತಿದೆ. ಒಳ್ಳೆ ಸಿನಿಮಾ ಮಾಡಿದ್ರೆ ಪ್ರೇಕ್ಷಕರು ಕೈಬಿಡಲ್ಲ ಎನ್ನುವ ಮಾತು ಮತ್ತೊಮ್ಮೆ ನಿಜವಾಗಿದೆ.
ಹಲವೆಡೆ ಹೌಸ್‌ಫುಲ್ ಪ್ರದರ್ಶನ ಕಂಡು ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಒಂದು ಸರಳ, ಸುಂದರ ಹಾಗೂ ಭಾವನಾತ್ಮಕ ಹಳ್ಳಿಯ ಕಥೆಗೆ ನೋಡುಗರು ಮಾರು ಹೋಗಿದ್ದಾರೆ. ಹಚ್ಚಹಸಿರಿನ ಗ್ರಾಮೀಣ ಪರಿಸರದಲ್ಲಿ ಸಾಗುವ ಈ ಸಿನಿಮಾ, ಸಂಕೀರ್ಣ ಕೌಟುಂಬಿಕ ಸಂಬಂಧಗಳು, ಮನುಷ್ಯತ್ವ ಮತ್ತು ಮುಗ್ಧ ಪ್ರೀತಿಯ ಸೂಕ್ಷ್ಮ ಎಳೆಗಳನ್ನು ಸೊಗಸಾಗಿ ತೆರೆಗೆ ತರಲಾಗಿದೆ.
ಶ್ರೀರಾಮ್, ನಾಯಕಿಯರಾದ ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ನಟನೆ ಚಿತ್ರದ ಬಲ ಹೆಚ್ಚಿಸಿದೆ. ರಂಗಾಯಣ ರಘು ತೂಕದ ನಟನೆ ಕೂಡ ಪ್ರೇಕ್ಷಕರ ಮನಗೆದ್ದಿದೆ. ಸುನಾದ್ ಗೌತಮ್ ಸಂಗೀತ ಹಾಗೂ ರಾಜ್‌ಕಾಂತ್ ಛಾಯಗ್ರಹಣ 'ಪ್ರೇಮದ ಊರಲಿ' ಚಿತ್ರಕ್ಕಿದೆ. ಇದು ಮೊತ್ತೊಂದು 'ಸು ಫ್ರಂ ಸೋ' ಆಗುತ್ತೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸಾಕಷ್ಟು ಜನಕ್ಕೆ ಸಿನಿಮಾ ಬಿಡುಗಡೆ ಆಗಿರುವುದೇ ಗೊತ್ತಿಲ್ಲ. ಚಿತ್ರತಂಡ ಇನ್ನಾದ್ರು ಪ್ರಚಾರ ಹೆಚ್ಚಿಸಬೇಕಿದೆ.
ಕಳೆದ ಶುಕ್ರವಾರ ಕನ್ನಡ ಏಳೆಂಟು ಸಿನಿಮಾಗು ತೆರೆಗೆ ಬಂದಿತ್ತು. ಅದರಲ್ಲಿ 'ಪ್ರೇಮದ ಊರಲಿ' ಕೂಡ ಒಂದು ಎನಿಸಿತ್ತು. ಆದರೆ ಭಾನುವಾರ ಟಿಕೆಟ್ ಬುಕ್ಕಿಂಗ್ ಜೋರಾಗಿತ್ತು. 24 ಗಂಟೆಗಳಲ್ಲಿ 20 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿತ್ತು. ಹೀಗೆ ಬಿಎಂಎಸ್‌ನಲ್ಲಿ ಟ್ರೆಂಡ್ ಆಗ್ತಿದ್ದಂತೆ ಸೋಮವಾರ ಶೋಗಳ ಸಂಖ್ಯೆ ಹೆಚ್ಚಾಗ್ತಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕೂಡ ಸಿನಿಮಾ ಸದ್ದು ಮಾಡ್ತಿದೆ. ಹಾಗಾಗಿ ನಿಧಾನವಾಗಿ ಶೋಗಳ ಸಂಖ್ಯೆ ಹೆಚ್ಚಿಸಲಾಗ್ತಿದೆ.