ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಕೂಡ 'ಪ್ರೇಮದ ಊರಲಿ' ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಈ ವಾರ ಸಿನಿಮಾ ಉತ್ತರ ಭಾರತ ಹಾಗೂ ವಿದೇಶಗಳಲ್ಲಿ ಬಿಡುಗಡೆ ಆಗಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ದೊಡ್ಡಮಟ್ಟದಲ್ಲಿ ಬೇರೆ ಕಡೆಗಳಲ್ಲಿ ಪ್ರೇಕ್ಷಕರ ಮುಂದೆ ಕೊಂಡೊಯ್ದಿದೆ. ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ವಿತರಕ ಕಾರ್ತಿಕ್ ಗೌಡ ಖುಷಿಯಾಗಿದ್ದಾರೆ.

ಎರಡು ವಾರಗಳ ಹಿಂದೆ ಕೆಲವೇ ಶೋಗಳಲ್ಲಿ 'ಪ್ರೇಮದ ಊರಲಿ' ಸಿನಿಮಾ ರಾಜ್ಯಾದ್ಯಂತ ತೆರೆಗಪ್ಪಳಿಸಿತ್ತು. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ನಿಧಾನವಾಗಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿತ್ತು. ಇದೀಗ ಹೊರ ರಾಜ್ಯಗಳಲ್ಲಿ ಕೂಡ ಇದೇ ಟ್ರೆಂಡ್ ಶುರುವಾಗಿದೆ. ಕಳೆದ ಭಾನುವಾರ ತಮಿಳುನಾಡಿದ ಹೊಸೂರಿನಲ್ಲಿ ಚಿತ್ರ ಮ್ಯಾಜಿಕ್ ಮಾಡಿತ್ತು. ಸಿನಿಮಾ ಬೇಡಿಕೆ ನೋಡಿ ಅಲ್ಲಿ ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ಬೆಳ್ಳಗ್ಗೆ 6.15ಕ್ಕೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

ಈಗಾಗಲೇ ತೆಲುಗಿಗೂ ಸಿನಿಮಾ ಡಬ್ ಆಗಿ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಿದೆ. ಅಲ್ಲಿಯೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು ವಿಮರ್ಶಕರು, ಪ್ರೇಕ್ಷಕರು 'ಪ್ರೇಮದ ಊರಲಿ' ಸಿನಿಮಾ ಬಗ್ಗೆ ಹಾಡಿ ಹೊಗಳಿದ್ದಾರೆ. ಆಂಧ್ರದ ರತ್ನಗಿರಿಯಲ್ಲಿ ಸಿನಿಮಾ ಹೌಸ್‌ಫುಲ್ ಆಗ್ತಿದೆ. ಇದೀಗ ರಾಜ್ಯದ ಮೂಲೆ ಮೂಲೆಗೆ ಸಿನಿಮಾ ತಲುಪಿದೆ.

ಹೊರರಾಜ್ಯಗಳ ರೆಸ್ಪಾನ್ಸ್

ಉತ್ತರ ಭಾರತದಲ್ಲಿ 'ಪ್ರೇಮದ ಊರಲಿ' ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಎನ್ನುವುದನ್ನು ವಿತರಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ ತಿಳಿಸಿದ್ದಾರೆ. "ಪ್ರೇಮದ ಊರಲ್ಲಿ' ಚಿತ್ರವು ಕರ್ನಾಟಕದ ಹೊರಗೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಪುಣೆ, ಹೈದರಾಬಾದ್, ಸೋಲಾಪುರ ಮತ್ತು ಇತರ ಕೆಲವು ನಗರಗಳಲ್ಲಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಅಮೆರಿಕದ ಫ್ರೀಮಾಂಟ್‌ನಲ್ಲಿರುವ 'ಸಿನೆಲೌಂಜ್' (Cinelounge) ಎಂಬ ಥಿಯೇಟರ್ ಸರಪಳಿಯು ವಾರಾಂತ್ಯದಲ್ಲಿ ದಿನಕ್ಕೆ 9 ಶೋಗಳನ್ನು ಸೇರಿಸಿದೆ. ಈ ಯಶಸ್ಸಿನ ಓಟವು ಗಡಿಯಾಚೆಗೂ ಮುಂದುವರಿದಿದೆ" ಎಂದು ಬರೆದುಕೊಂಡಿದ್ದಾರೆ.

ಎಲ್ಲೆಲ್ಲಿ ಸಿನಿಮಾ ಪ್ರದರ್ಶನ

ಮುಂಬೈ, ಥಾಣೆ, ಮಹಾರಾಷ್ಟ್ರ, ಗುಜರಾಜ್, ಗೋವಾ, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ 'ಪ್ರೇಮದ ಊರಲಿ' ಸಿನಿಮಾ ಬಿಡುಗಡೆ ಆಗಿರುವುದು ವಿಶೇಷ. ಕನ್ನಡದ ಸ್ಟಾರ್ ನಟರ ಸಿನಿಮಾಗಳೇ ಕರ್ನಾಟಕ ಬಿಟ್ಟು ಹೊರ ರಾಜ್ಯಗಳಲ್ಲಿ ಬಿಡುಗಡೆ ಆಗುವುದು ಕಷ್ಟ ಎನ್ನುವಂತಹ ವಾತಾರವರಣ ನಿರ್ಮಾಣವಾಗಿದೆ. ಆದರೆ ಕಡಿಮೆ ಬಜೆಟ್ಟಿನ ಹೊಸಬರ ಸಿನಿಮಾವೊಂದು ಮ್ಯಾಜಿಕ್ ಮಾಡಿದೆ.

15 ದಿನಗಳ ಕಲೆಕ್ಷನ್

ಇನ್ನು ಗಳಿಕೆ ವಿಚಾರಕ್ಕೆ ಬಂದರೆ ದಿನದಿಂದ ದಿನಕ್ಕೆ 'ಪ್ರೇಮದ ಊರಲಿ' ಸಿನಿಮಾ ಆರ್ಭಟ ಮುಂದುವರೆಸಿದೆ. ಎಲ್ಲಾ ಕಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. 3ನೇ ಶುಕ್ರವಾರ ಸಿನಿಮಾ 4.50 ಕೋಟಿ ರೂ. ದೋಚಿ ದಾಖಲೆ ಬರೆದಿದೆ. ಒಟ್ಟು ಕಲೆಕ್ಷನ್ 33 ಕೋಟಿ ರೂ. ಗಡಿ ದಾಟಿದೆ.