ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವ 'ಪ್ರೇಮದ ಊರಲಿ' ಸಿನಮಾ ಇದೀಗ ತೆಲುಗಿಗೂ ಡಬ್ ಆಗಿ ಬಿಡುಗಡೆಯಾಗಿದೆ. ನಿನ್ನೆ(ಅಕ್ಟೋಬರ್ 1) ನಡೆದ ಪ್ರೀಮಿಯರ್‌ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ. ಅದ್ಭುತ ಸಿನ್ಮಾ, ಫ್ಯಾಮಿಲಿ ಸಮೇತ ನೋಡಬೇಕು, ಇತ್ತೀಚಿನ ದಿನಗಳಲ್ಲಿ ಇಂತ ಸಿನಿಮಾ ನೋಡ್ಲಿಲ್ಲ, ಹೆಣ್ಣುಮಕ್ಕಳು ಮಿಸ್ ಮಾಡಬೇಡಿ, ಮಕ್ಕಳಿಗೆ ತೋರಿಸಬೇಕು, ಎಷ್ಟೇ ಪ್ರಯತ್ನಿಸಿದ್ರು ಕೊನೆಗೂ ಅಳು ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

'ಪ್ರೇಮನೆ ಊರಿಲಿ' ಹೆಸರಿನಲ್ಲಿ ಸಿನಿಮಾ ಈಗ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಿದೆ. ಹೈದರಾಬಾದ್‌ನಲ್ಲಿ 16 ಶೋಗಳಲ್ಲಿ ಸಿನಿಮಾ ಮೊದಲ ದಿನ ಪ್ರದರ್ಶನ ಆರಂಭಿಸಿದೆ. ನಿಧಾನವಾಗಿ ಶೋಗಳ ಸಂಖ್ಯೆ ಹೆಚ್ಚಾಗುವ ಸುಳಿವು ಸಿಕ್ಕಿದೆ. 'ಕಾಂತಾರ' ಹಾಗೂ 'ಸು ಫ್ರಂ ಸೋ' ಚಿತ್ರಗಳು ಕೂಡ ಕನ್ನಡದಲ್ಲಿ ಗೆದ್ದ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ 'ಪ್ರೇಮದ ಊರಲಿ' ಸರದಿ.

ಕರ್ನಾಟಕದಲ್ಲಿ ಇವತ್ತು ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಪ್ರೇಕ್ಷಕರ ಮುಗಿಬಿದ್ದು ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಹೆಚ್ಚಾಗುತ್ತಲೇ ಇದೆ. ಸಿನಿಮಾ ಕ್ರೇಜ್ ಹೇಗಿದೆ ಅಂದ್ರೆ ಗಂಟೆಗೆ 8 ಸಾವಿರ ಟಿಕೆಟ್ ಬುಕ್ ಆಗಿ ದಾಖಲೆ ಬರೆದಿದೆ. 'ಟಾಕ್ಸಿಕ್' ಬಿಟ್ಟು ಈ ವರ್ಷ ಯಾವುದೇ ಕನ್ನಡ ಚಿತ್ರಕ್ಕೆ ಇಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ.

ಹೈದರಾಬಾದ್‌ನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಚಿತ್ರತಂಡ ಕೂಡ ಭಾಗಿ ಆಗಿತ್ತು. ತೆಲುಗು ಪ್ರೇಕ್ಷಕರ ಪ್ರೀತಿ ಕಂಡು ಮಂತ್ರಮುಗ್ಧರಾಗಿಬಿಟ್ಟರು. ಇವತ್ತು 'ಗಾಂಧಿ ಜಯಂತಿ' ಹಿನ್ನೆಲೆ ಸರ್ಕಾರಿ ರಜೆ ಇದೆ. ಸಿನಿಮಾ ಗಳಿಕೆಗೆ ಇದು ವರವಾಗಬಹುದು. ಮತ್ತೊಂದು ಕಡೆ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದ್ದು ಕೆಲವೆಡೆ 'ಪ್ರೇಮದ ಊರಲಿ' ಚಿತ್ರಕ್ಕೆ ಹಿನ್ನಡೆ ಆಗುವ ಸುಳಿವು ಸಿಕ್ತಿದೆ.