ಎಲ್ಲಾ ಕಡೆ 'ಪ್ರೇಮದ ಊರಲಿ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ನಡೀತಿದೆ. ವಾರದ ದಿನಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಆಗ್ತಿದೆ. ಸದ್ಯಕ್ಕೆ ಸಿನಿಮಾ ಆರ್ಭಟ ಕಮ್ಮಿ ಆಗುವಂತೆ ಕಾಣ್ತಿಲ್ಲ. ದೊಡ್ಡ ಸಿನಿಮಾಗಳ ದಾಖಲೆಯನ್ನು ಈ ಹೊಸಬರ ಸಿನಿಮಾ ಹಿಂದಿಕ್ಕಿದೆ. ಈಗಾಗಲೇ 50 ಕೋಟಿ ರೂ. ಕೊಳ್ಳೆ ಹೊಡೆದಿರುವ ಸಿನಿಮಾ ಮುಂದೆ ಹೇಗೆ ಸದ್ದು ಮಾಡುತ್ತೋ ನೋಡಬೇಕು. ಇದೆಲ್ಲದರ ನಡುವೆ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ನಡೀತಿದೆ.

ಯಾವುದೇ ಸಿನಿಮಾ ತೆರೆಕಂಡು ತಿಂಗಳ ಬಳಿಕ ಓಟಿಟಿಗೆ ಬರುತ್ತದೆ. 'ಪ್ರೇಮದ ಊರಲಿ' ಚಿತ್ರದ ಓಟಿಟಿ ಹಾಗೂ ಟಿವಿ ರೈಟ್ಸ್ ಇನ್ನು ಮಾರಾಟ ಆಗಿಲ್ಲ. ಭರ್ಜರಿ ಬೆಲೆಗೆ ವ್ಯವಹಾರ ಕುದುರುವ ಸಾಧ್ಯತೆಯಿದೆ. ಆದರೆ ಸದ್ಯಕ್ಕೆ ನಮ್ಮ ಸಿನಿಮಾ ಓಟಿಟಿಗೆ ಬರಲ್ಲ ಎಂದು ಚಿತ್ರತಂಡ ಸ್ವಷ್ಟನೆ ನೀಡಿದೆ. ಯಾವುದೇ ಸಿನಿಮಾ ತೆರೆಕಂಡು 20 ದಿನ ಬಳಿಕ ಕೆಲವರು ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ. ಇನ್ನೆರಡು ವಾರದಲ್ಲಿ ಓಟಿಟಿಗೆ ಬರುತ್ತೆ. ಮನೆಯಲ್ಲೇ ಕೂತು ನೋಡೋಣ ಎಂದು ಭಾವಿಸುತ್ತಾರೆ. ಅದೇ ಕಾರಣಕ್ಕೆ ಚಿತ್ರತಂಡ ಸ್ಪಷ್ಟನೆ ನೀಡಿದೆ.

ಸದ್ಯಕ್ಕೆ ಚಿತ್ರದ ಓಟಿಟಿ ಅಥವಾ ಟಿವಿ ರೈಟ್ಸ್ ಮಾರಾಟ ಆಗಿಲ್ಲ ಎಂದು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ. "ನಮ್ಮ ಮೊದಲ ಆದ್ಯತೆ ಚಿತ್ರಮಂದಿರ. ಪ್ರೇಕ್ಷಕರು 'ಪ್ರೇಮದ ಊರಲಿ' ಚಿತ್ರವನ್ನು ದೊಡ್ಡ ಪರದೆಯ ಮೇಲೆಯೇ ನೋಡಿ ಆಸ್ವಾದಿಸಬೇಕು. ಚಿತ್ರದ ಭಾವನೆ, ಪ್ರೀತಿ ಮತ್ತು ಕಥೆಯ ಸಾರವನ್ನು ಚಿತ್ರಮಂದಿರದ ವಾತಾವರಣದಲ್ಲೇ ಪೂರ್ಣವಾಗಿ ಅನುಭವಿಸಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ" ಎಂದು ಚಿತ್ರತಂಡ ತಿಳಿಸಿದೆ.

'ಪ್ರೇಮದ ಊರಲಿ' ಸಿನಿಮಾ ಹಿಟ್ ಆಗಿದೆ. ಓಟಿಟಿ ಸ್ಟ್ರೀಮಿಂಗ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಹಾಗಾಗಿ ಓಟಿಟಿ ಸಂಸ್ಥೆಗಳು ಕೂಡ ಚಿತ್ರದ ರೈಟ್ಸ್ ಕೊಂಡುಕೊಳ್ಳಲು ಮುಗಿಬಿದ್ದಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಅದೇ ಕಾರಣಕ್ಕೆ ಚಿತ್ರತಂಡ ಈಗ ಸ್ಪಷ್ಟನೆ ನೀಡುವಂತಾಗಿದೆ.