ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ವೆಬ್ ಸೀರಿಸ್ 'ಅಯ್ಯನ ಮನೆ' ಸೀಸನ್- 2 ಬಿಡುಗಡೆಗೆ ಸಜ್ಜಾಗಿದೆ. ಶ್ರುತಿ ನಾಯ್ಡು ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಇಂದಿರಾ ಅವರ ನಿರ್ದೇಶನದ ಹೊಸ ಸೀಸನ್ ಒಟ್ಟು 6 ಎಪಿಸೋಡ್ಗಳಾಗಿ ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮೊದಲ ಸೀಸನ್ನಅಂತ್ಯದಿಂದ ನೋಡುಗರಲ್ಲಿ ಹುಟ್ಟಿಕೊಂಡಿದ್ದ ಕುತೂಹಲಕ್ಕೆ ಅಕ್ಟೋಬರ್ 23ರಂದು ತೆರೆ ಬೀಳಲಿದೆ.
ಖುಷಿ ರವಿ ಮತ್ತು ಅಕ್ಷಯ್ ನಾಯಕ್ 'ಅಯ್ಯನ ಮನೆ'- 2 ವೆಬ್ ಸೀರಿಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾಲಯ ಅಮಾವಾಸ್ಯೆಯ ಕರಾಳ ಮತ್ತು ನಿಗೂಢ ಹಿನ್ನೆಲೆಯಲ್ಲಿ ಈ ಸೀಸನ್ನ ಕಥೆ ಅನಾವರಣ ಆಗಲಿದೆ. ಶತಮಾನಗಳಷ್ಟು ಹಳೆಯದಾದ ಪೂರ್ವಜರ ಮನೆಯಲ್ಲಿ ನಡೆದ ನಾಗಲಾಂಬಿಕೆಯ ನಿಗೂಢ ಸಾವಿನ ಮರುಪ್ರಶ್ನೆಯು ಇಡೀ ಕುಟುಂಬದ ನೆಮ್ಮದಿಯನ್ನು ಕದಡುತ್ತದೆ. ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ. ಸತ್ಯ ಮತ್ತು ಭ್ರಮೆಗಳ ನಡುವಿನ ವ್ಯತ್ಯಾಸ ತಿಳಿಯದೆ ಕಂಗಾಲಾಗುವ ಕುಟುಂಬದ ತಲ್ಲಣವನ್ನು ಎಳೆ ಎಳೆಯಾಗಿ ಕಟ್ಟಿಕೊಡಲಾಗಿದೆ.
ಜಾಜಿಯ ಪಾತ್ರವು ಅತ್ಯಂತ ಸವಾಲಿನದ್ದಾಗಿದೆ ಎಂದು ಖುಷಿ ರವಿ ಹೇಳಿದ್ದಾರೆ. ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಆಕೆ ತನ್ನೊಳಗಿನ ಅಗಾಧ ಶಕ್ತಿಯನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಒಬ್ಬ ಪತ್ನಿ ಮತ್ತು ತಾಯಿಯಾಗಿ ಆಕೆಯ ಆಂತರಿಕ ಹೋರಾಟ, ಭಯವನ್ನು ಮೆಟ್ಟಿ ನಿಲ್ಲುವ ಧೈರ್ಯ ನೋಡುಗರಿಗೆ ಭಾವನಾತ್ಮಕವಾಗಿ ಹತ್ತಿರವಾಗಲಿದೆ ಎಂದು ಆಕೆ ತಿಳಿಸಿದ್ದಾರೆ.
ಅಕ್ಷಯ್ ನಾಯಕ್ ಮಾತನಾಡಿ, ಕುಟುಂಬದ ಮೇಲಿನ ಪ್ರೀತಿ, ಜವಾಬ್ದಾರಿ ಹಾಗೂ ಸತ್ಯದ ಹುಡುಕಾಟದ ನಡುವೆ ಸಿಲುಕಿ ಒದ್ದಾಡುವ ನಾಯಕನ ಆಂತರಿಕ ತೊಳಲಾಟ ಮತ್ತು ಅಸಹಾಯಕ ಮುಖವನ್ನು ಪ್ರೇಕ್ಷಕರು ಈ ಆರು ಕಂತುಗಳಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ" ಎಂದಿದ್ದಾರೆ. ಕನ್ನಡದಲ್ಲಿ ವೆಬ್ ಸೀರಿಸ್ಗಳ ಸಂಖ್ಯೆ ಬಹಳ ಕಮ್ಮಿ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತದೆ. ಅದಕ್ಕೆ ವೀಕ್ಷಕರ ಬೆಂಬಲ ಬೇಕಿದೆ.