'ಪ್ರೇಮದ ಊರಲಿ' ಗೆಲುವಿನ ನಾಗಾಲೋಟ ಮುಂದುವರೆದಿದೆ. ಸೋಮವಾರದ ಪರೀಕ್ಷೆಯಲ್ಲಿ ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್ ಆಗಿದೆ. ಶುಕ್ರವಾರ, ಶನಿವಾರ, ಭಾನುವಾರ ಮಾತ್ರವಲ್ಲದೇ ಸೋಮವಾರ ಕೂಡ ಒಂದು ಲಕ್ಷ ಟಿಕೆಟ್ ಬುಕ್ ಆಗಿ ದಾಖಲೆ ಬರೆದಿದೆ. ಇದೀಗ ವರ್ಷದ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನಿಸಿಕೊಂಡಿದೆ.

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕರ್ನಾಟಕದಲ್ಲಿ 40 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಅದು ಪ್ಯಾನ್ ಇಂಡಿಯಾ ಸಿನಿಮಾ. ಅಲ್ಲದೇ ನ್ಯಾಷನಲ್ ಸ್ಟಾರ್ ಎನಿಸಿಕೊಂಡ ರಾಕಿಂಗ್ ಸ್ಟಾರ್ ಸಿನಿಮಾ. 600 ಕೋಟಿ ರೂ. ಬಜೆಟ್ ಸಿನಿಮಾ.. ಆದರೆ 'ಪ್ರೇಮದ ಊರಲಿ' ಹೊಸಬರ ಸಿನಿಮಾ. ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ದೃಶ್ಯಕಾವ್ಯ.

25 ಕೋಟಿ ಕ್ಲಬ್

ಈ ವರ್ಷ ಕನ್ನಡ ಸಿನಿಮಾಗಳ ಆರ್ಭಟ ಕಮ್ಮಿ ಎಂದೇ ಹೇಳಬಹುದು. 'ಲವ್‌ ಮಾಕ್ಟೇಲ್- 3', 'ರಕ್ಕಸಪುರದೋಳ್' ಹಾಗೂ 'ಸಿಟಿಲೈಟ್ಸ್' ಸಿನಿಮಾಗಳು ಒಂದು ಹಂತಕ್ಕೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿದ್ದವು. ಆ ಎಲ್ಲಾ ಸಿನಿಮಾಗಳ ದಾಖಲೆಯನ್ನು 'ಪ್ರೇಮದ ಊರಲಿ' ಸಿನಿಮಾ ಅಳಿಸಿ ಹಾಕಿದೆ. ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರವನ್ನು ಕೂಡ ಹಿಂದಿಕ್ಕಿ ಸಂಚಲನ ಸೃಷ್ಟಿಸಿದೆ. ಸದ್ಯ 12 ದಿನಕ್ಕೆ ಮನೋಜ್ ಕುಮಾರ್ ಸಾರಥ್ಯದ ಸಿನಿಮಾ 25 ಕೋಟಿ ರೂ. ಕ್ಲಬ್ ಸೇರಿದೆ.

50 ಕೋಟಿ ಗಳಿಸುತ್ತಾ ?

ಈಗಾಗಲೇ ತೆಲುಗಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಈ ವಾರ ಉತ್ತರ ಭಾರತ ಹಾಗೂ ವಿದೇಶಗಳಲ್ಲಿ 'ಪ್ರೇಮದ ಊರಲಿ' ಮೆರವಣಿಗೆ ಸಾಗಲಿದೆ. ಹಾಗಾಗಿ ಸಿನಿಮಾ 50 ಕೋಟಿ ರೂ. ಗಳಿಸುತ್ತಾ ಎನ್ನುವ ಲೆಕ್ಕಾಚಾರ ಶುರುವಾಗಿದೆ.