ಸಣ್ಣ ಬಜೆಟ್ ಸಿನಿಮಾ 'ಪ್ರೇಮದ ಊರಲಿ' ಬಾಕ್ಸಾಫೀಸ್‌ನಲ್ಲಿ ದಾಖಲೆಯ ಓಟ ಮುಂದುವರೆಸಿದೆ. ಗಾಂಧಿಜಯಂತಿ ರಜೆ ಚಿತ್ರದ ಕಲೆಕ್ಷನ್‌ಗೆ ವರವಾಗಿತ್ತು. ಒಂದೇ ದಿನ 1 ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ನೋಡಿದ್ದಾರೆ. ಆ ಮೂಲಕ 8ನೇ ದಿನ ಕಲೆಕ್ಷನ್ 3 ಕೋಟಿ ರೂ. ದಾಟಿದೆ.

ಮೊದಲ ದಿನ 9.5 ಲಕ್ಷ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಮೊದಲ ವಾರ 5 ಕೋಟಿ ರೂ. ಗಳಿಕೆ ಕಂಡಿತ್ತು. ಎರಡನೇ ವಾರದ ಮೊದಲ ದಿನ 3.46 ಕೋಟಿ ರೂ. ಬಾಚಿ ಎಲ್ಲರ ಹುಬ್ಬೇರಿಸಿದೆ. ಶುಕ್ರವಾರ ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗಿತ್ತು. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು ಸಿನಿಮಾ ಮುನ್ನುಗ್ಗುತ್ತಿದೆ. ಉತ್ತರಭಾರತದ ಯುವತಿಯೊಬ್ಬರು ಸಿನಿಮಾ ನೋಡಿ ಭಾವುಕಳಾಗಿ ಕಣ್ಣೀರಾಗಿದ್ದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಪ್ರಭಾವ ಬೀರುತ್ತಿದೆ.

'ಬೇಲ್', 'ದೃಶ್ಯಂ- 3' ಸಿನಿಮಾಗಳ ಪೈಪೋಟಿಯಿಂದ 'ಪ್ರೇಮದ ಊರಲಿ' ಚಿತ್ರಕ್ಕೆ ಶೋಗಳು ಕಮ್ಮಿ ಆಗ್ತಿದೆ. ಹಾಗಾಗಿ ಬೆಳಗಿನ ಜಾವ ವಿಶೇಷ ಪ್ರದರ್ಶನ ಏರ್ಪಡಿಸಲಾಗ್ತಿದೆ. ಇದು ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಎಂಥಾದ್ದು ಎಂದು ಸಾರಿ ಹೇಳ್ತಿದೆ. ಈಗಾಗಲೇ ಸಿನಿಮಾ 10 ಕೋಟಿ ರೂ. ಕ್ಲಬ್ ಸೇರಿದೆ. ದೊಡ್ಡ ಸಿನಿಮಾಗಳಿಗೆ ಹೋಲಿಸಿದರೆ ಇದು ಚಿಕ್ಕದಾಗಿ ಕಾಣಬಹುದು. ಆದರೆ ಸ್ಟಾರ್ ಕಲಾವಿದರು ಇಲ್ಲದೇ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ. ಎಲ್ಲಾ ನಟರ ಅಭಿಮಾನಿಗಳು ಸಿನಿಮಾ ನೋಡುತ್ತಿದ್ದಾರೆ. ಫ್ಯಾಮಿಲಿ ಸಮೇತ ಚಿತ್ರಮಂದಿರಗಳಿಗೆ ಬರ್ತಿದ್ದಾರೆ. ಇದಲ್ಲವೇ ಚಿತ್ರದ ನಿಜವಾದ ಗೆಲುವು.

9ನೇ ದಿನ ಭರ್ಜರಿ ಬುಕ್ಕಿಂಗ್

ಎರಡನೇ ಶನಿವಾರ ಅಂದ್ರೆ ಇಂದು 'ಪ್ರೇಮದ ಊರಲಿ' ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಎಲ್ಲಾ ಕಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ನಾಳೆ ಇದು ಮತ್ತಷ್ಟು ಹೆಚ್ಚಾಗಲಿದೆ. ಶನಿವಾರ ಹಾಗೂ ಭಾನುವಾರ ಬಾಕ್ಸಾಫೀಸ್‌ ಶೇಕ್ ಆಗುವುದು ಗ್ಯಾರಂಟಿ.

ತೆಲುಗಿನಲ್ಲಿ ಸಿನಿಮಾ ರಿಲೀಸ್

ಈಗಾಗಲೇ ತೆಲುಗಿಗೂ ಸಿನಿಮಾ ಡಬ್ ಆಗಿ ಬಿಡುಗಡೆಯಾಗಿದೆ. ಅಲ್ಲಿನ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಸಂತಸ ಹಂಚಿಕೊಂಡಿದೆ.