ಶ್ರೀರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ನಟನೆಯ 'ಪ್ರೇಮದ ಊರಲಿ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ. ಆದರೆ ಶನಿವಾರಕ್ಕಿಂತ ಭಾನುವಾರದ ಕಲೆಕ್ಷನ್ ಕಮ್ಮಿ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ನಿಧಾನವಾಗಿ ಸಿನಿಮಾ ತನ್ನ ಯಶಸ್ವಿ ಓಟ ಮುಗಿಸುತ್ತಿದ್ಯಾ ಎನ್ನುವ ಅನುಮಾನ ಮೂಡಿದೆ.

ದಿನದಿಂದ ದಿನಕ್ಕೆ 'ಪ್ರೇಮದ ಊರಲಿ' ಸಿನಿಮಾ ಪ್ರೇಕ್ಷಕರನ್ನು ಯಾವ ಮಟ್ಟಿಗೆ ಸೆಳೆಯುತ್ತಿದೆ ಎನ್ನುವುದು ಗೊತ್ತೇತಿದೆ. ದಿನಕ್ಕೆ ಲಕ್ಷ ಲಕ್ಷ ಜನ ಸಿನಿಮಾ ನೋಡುತ್ತಿದ್ದಾರೆ. ಬುಕ್‌ಮೈಶೋ ಲೆಕ್ಕದ ಪ್ರಕಾರವೇ ಈಗಾಗಲೇ 15 ಲಕ್ಷ ಜನ ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ಇನ್ನು ಚಿತ್ರಮಂದಿರದಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡಿದವರ ಲೆಕ್ಕ ಸಿಕ್ಕಿಲ್ಲ.

ವಿದೇಶದಲ್ಲಿರುವ ಕನ್ನಡಿಗರು ನಮ್ಮ ಊರಲ್ಲೂ ಸಿನಿಮಾ ಬಿಡುಗಡೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ರಾತ್ರಿ 1 ಗಂಟೆಯಲ್ಲಿ ಕೂಡ ಸಾವಿರಾರು ಟಿಕೆಟ್ ಬುಕ್ ಆಗ್ತಿದೆ. ಇದು ಕನಸೋ ನಿಜವೋ ಎಂದು ಈ ಕ್ಷಣಕ್ಕೂ ಚಿತ್ರತಂಡ ಶಾಕ್ ಆಗಿದೆ. ಇಷ್ಟು ಕನ್ನಡ ಪ್ರೇಕ್ಷಕರು ಕರ್ನಾಟಕದಲ್ಲಿ ಇದ್ದಾರಾ ಎನ್ನುವ ಅನುಮಾನ ಮೂಡುವಂತಾಗಿದೆ. ಸಿನಿಮಾ ತೆರೆಮೇಲೆ ಅಕ್ಷರಶಃ ಮ್ಯಾಜಿಕ್ ಮಾಡಿಬಿಟ್ಟಿದೆ.

ಭಾನುವಾರ ತಗ್ಗಿನ ಕಲೆಕ್ಷನ್

ಹೌದು.. ಮೂರನೇ ಭಾನುವಾರ(ಅಕ್ಟೋಬರ್ 11) 'ಪ್ರೇಮದ ಊರಲಿ' ಚಿತ್ರದ ಕಲೆಕ್ಷನ್ ಕಮ್ಮಿ ಆಗಿದೆ. ಶನಿವಾರ ಮಹಾಲಯ ಅಮಾವಾಸ್ಯೆ ರಜೆ ಇದ್ದಿದ್ದರಿಂದ ದಾಖಲೆ ಮಟ್ಟದಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದರು. ಶನಿವಾರ 2.60 ಲಕ್ಷ ಜನ ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದ್ದರು. ಆದರೆ ಭಾನುವಾರ 1.76 ಲಕ್ಷ ಟಿಕೆಟ್ ಬುಕ್ ಆಗಿದೆ. ಅಲ್ಲಿಗೆ 65 ಸಾವಿರ ಟಿಕೆಟ್ ಕಮ್ಮಿ ಆದಂತಾಗಿದೆ. ಭಾನುವಾರ ಜನ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದರಿಂದ ಈ ವ್ಯತ್ಯಾಸ ಆಗಿರಬಹುದು ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಆದರೂ ಇದು ಭರ್ಜರಿ ಕಲೆಕ್ಷನ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸೋಮವಾರದ ಪರೀಕ್ಷೆ

ಇವತ್ತು(ಅಕ್ಟೋಬರ್ 12) 'ಪ್ರೇಮದ ಊರಲಿ' ಚಿತ್ರಕ್ಕೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ. ವೀಕೆಂಡ್ ಮುಗಿದು ವಾರದ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ಕಮ್ಮಿ. ಹಾಗಾಗಿ ಇವತ್ತಿನ ರೆಸ್ಪಾನ್ಸ್ ಸಿನಿಮಾ ಮುಂದೆ ಹೇಗೆ ಸದ್ದು ಮಾಡಬಹುದು ಎನ್ನುವುದರ ದಿಕ್ಸೂಚಿ ಆಗಲಿದೆ. ವಿಪರ್ಯಾಸ ಅಂದ್ರೆ ಬೆಳಗ್ಗೆಯಿಂದ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಈ ಕ್ಷಣಕ್ಕೂ(ಬೆಳಗ್ಗೆ 10 ಗಂಟೆ) ಪ್ರತಿಗಂಟೆಗೆ 6 ಸಾವಿರ ಟಿಕೆಟ್ ಬುಕ್ ಆಗ್ತಿದೆ. ಅಲ್ಲಿಗೆ ಇವತ್ತು ಕೂಡ ಸಿನಿಮಾ ದೊಡ್ಡಮಟ್ಟದಲ್ಲಿ ಅಬ್ಬರಿಸುವುದು ಪಕ್ಕಾ ಎನ್ನುವಂತಾಗಿದೆ.

ಒಟ್ಟು ಕಲೆಕ್ಷನ್

ಇನ್ನು 'ಪ್ರೇಮದ ಊರಲಿ' 17 ದಿನಕ್ಕೆ ಒಟ್ಟು ಕಲೆಕ್ಷನ್ 50 ಕೋಟಿ ರೂ. ಗಡಿ ದಾಟಿದೆ. ದೇಶವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಹೊರರಾಜ್ಯಗಳಲ್ಲಿ ಶೋಗಳನ್ನು ಹೆಚ್ಚಿಸುವಂತೆ ಬೇಡಿಕೆ ಶುರುವಾಗಿದೆ ಎಂದು ವಿತರಕ ಕಾರ್ತಿಕ್ ಗೌಡ ತಿಳಿಸಿದ್ದಾರೆ. ಬೇರೆ ಕಡೆಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಟ್ರೆಂಡ್ ಹೀಗೆ ಮುಂದುವರೆದರೆ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿದ್ರು ಅಚ್ಚರಿಪಡಬೇಕಿಲ್ಲ.