ಮನೋಜ್ ಕುಮಾರ್ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್ 'ಪ್ರೇಮದ ಊರಲಿ' ಸಿನಿಮಾ ಅಸಾಧ್ಯವನ್ನು ಸಾಧಿಸುತ್ತಾ ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ವೀಕೆಂಡ್‌ಗಿಂತ ವಾರದ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಭರ್ಜರಿ ಆಗಿದೆ. ಈಗಾಗಲೇ ಸಿನಿಮಾ ತೆರೆಕಂಡು 14 ದಿನ ಪೂರೈಸಿದೆ.

ಸಾಮಾನ್ಯವಾಗಿ ಸಿನಿಮಾಗಳು ಭರ್ಜರಿ ಓಪನಿಂಗ್ ಪಡೆದು ಬಳಿಕ ಕಲೆಕ್ಷನ್ ತಗ್ಗಿಸಿಕೊಳ್ಳುತ್ತವೆ. ಆದರೆ 'ಪ್ರೇಮದ ಊರಲಿ' ಸಿನಿಮಾ ವಿಚಾರದಲ್ಲಿ ಅದು ಉಲ್ಟಾ ಆಗಿದೆ. 13ನೇ ದಿನಕ್ಕಿಂತ 14ನೇ ದಿನ ಗಳಿಕೆ ಹೆಚ್ಚಾಗಿದೆ. ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದು ಇದಕ್ಕೆ ಸ್ಪಷ್ಟ ನಿದರ್ಶನ. ಮಲ್ಟಿಪ್ಲೆಕ್ಸ್ ಮಾತ್ರವಲ್ಲ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಕೂಡ ಸಿನಿಮಾ ಸೌಂಡ್ ಮಾಡ್ತಿದೆ. ಜನ ಕ್ಯೂ ನಿಂತು ಟಿಕೆಟ್ ಖರೀದಿಸುತ್ತಿದ್ದಾರೆ. ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡಿದವರು ಇದ್ದಾರೆ.

14ನೇ ದಿನ ಕಲೆಕ್ಷನ್

'ಪ್ರೇಮದ ಊರಲಿ' ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದರೆ 14ನೇ ದಿನ ದಾಖಲೆಯ 3.90 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ ಸದ್ದು ಮಾಡಿದೆ. ಇವತ್ತಿಗೂ ಎಲ್ಲಾ ಕಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಈ ವಾರಾಂತ್ಯದಲ್ಲಿ ಸಿನಿಮಾ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಆದಷ್ಟು ಬೇಗ ಸಿನಿಮಾ 50 ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆಯಿದೆ.

20 ಲಕ್ಷ ಜನ ವೀಕ್ಷಣೆ

ಈವರಗೆ ಬರೋಬ್ಬರಿ 20 ಲಕ್ಷ ಜನ 'ಪ್ರೇಮದ ಊರಲಿ' ಸಿನಿಮಾ ವೀಕ್ಷಿಸಿರುವುದಾಗಿ ಹೇಳಲಾಗ್ತಿದೆ. ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್ ಲೆಕ್ಕ ಹಾಕಿದ್ರು 12 ಲಕ್ಷ ಜನ ಸಿನಿಮಾ ನೋಡಿರುವುದು ಖಚಿತವಾಗ್ತಿದೆ. ನಿನ್ನೆ(ಅಕ್ಟೋಬರ್ 8) ಒಂದೇ ದಿನ ಬುಕ್‌ಮೈ ಶೋನಲ್ಲಿ 1.54 ಲಕ್ಷ ಟಿಕೆಟ್ ಬುಕ್‌ಮೈ ಶೋನಲ್ಲಿ ಬುಕ್ ಆಗಿತ್ತು. ಒಟ್ಟು 28.97 ಕೋಟಿ ರೂ. ನೆಟ್ ಕಲೆಕ್ಷನ್ ಆಗಿರುವ ಅಂದಾಜಿದೆ. ಆಂಧ್ರ, ತೆಲಂಗಾಣದಲ್ಲಿ ಕೂಡ ಸಿನಿಮಾ ಡಬ್ ಆಗಿ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ವಾರ ಉತ್ತರ ಭಾರತ ಹಾಗೂ ವಿದೇಶಗಳಲ್ಲಿ 'ಪ್ರೇಮದ ಊರಲಿ' ಮೆರವಣಿಗೆ ಸಾಗಲಿದೆ. ಹಾಗಾಗಿ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

ಸಿನಿಮಾ ಕ್ರೇಜ್

ಅಬಾಲವೃದ್ಧರಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸಿನಿಮಾ ಸೆಳೆಯುತ್ತಿದೆ. ಫ್ಯಾಮಿಲಿ ಸಮೇತ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಬಹಳ ವರ್ಷಗಳಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದೇ ಇರುವವರು 'ಪ್ರೇಮದ ಊರಲಿ' ಅನುಭವ ಪಡೆದು ಬರ್ತಿದ್ದಾರೆ. ಸಂಸದ ಡಾ. ಸಿಎನ್ ಮಂಜುನಾಥ್ ದಂಪತಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 15 ವರ್ಷಗಳ ಬಳಿಕ ಪತ್ನಿ ಕೇಳಿದ್ದಕ್ಕೆ ಸಿನಿಮಾ ನೋಡಲು ಬಂದಿದ್ದಾಗಿ ಹೇಳಿದ್ದಾರೆ.