ಒಳ್ಳೆ ಸಿನಿಮಾ ಬಂದ್ರೆ ಕನ್ನಡ ಸಿನಿರಸಿಕರು ಕೈಹಿಡಿಯುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 'ಪ್ರೇಮದ ಊರಲಿ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಈ ಯಾವುದೇ ಕನ್ನಡ ಚಿತ್ರ ಮಾಡದ ದಾಖಲೆಯನ್ನು ಹಳ್ಳಿ ಸೊಗಡಿನ ಸಿನಿಮಾ ಮಾಡಿ ತೋರಿಸಿದೆ. ರಂಗಾಯಣ ರಘು ಬಿಟ್ಟರೆ ಬೇರೆ ದೊಡ್ಡ ಕಲಾವಿದರು ಚಿತ್ರದಲ್ಲಿಲ್ಲ. ಆದರೂ ಕಂಟೆಂಟ್ ಚಿತ್ರವನ್ನು ಗೆಲ್ಲಿಸಿದೆ.

ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು 'ಪ್ರೇಮದ ಊರಲಿ' ಸಿನಿಮಾ ಸದ್ದು ಮಾಡ್ತಿದೆ. ಈ ವಾರ ಒಂದಷ್ಟು ದೊಡ್ಡ ಸಿನಿಮಾಗಳು ತೆರೆಗೆ ಬರ್ತಿದ್ದು ಆತಂಕ ಮೂಡಿಸಿದೆ. 'ಪ್ರೇಮದ ಊರಲಿ' ಚಿತ್ರದ ಶೋಗಳನ್ನು ಬೇರೆ ಸಿನಿಮಾಗಳು ಕಸಿದುಕೊಳ್ಳುತ್ತಿವೆ. ಆದರೂ ವೀಕೆಂಡ್ ಸಿನಿಮಾ ಮ್ಯಾಜಿಕ್ ಮಾಡುವ ಸುಳಿವು ಸಿಕ್ತಿದೆ.

ಹೊಸ ದಾಖಲೆ

ಮನೋಜ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಎಲ್ಲರ ನಿರೀಕ್ಷೆ ಮೀರಿ ಸಿನಿಮಾ ದರ್ಬಾರ್ ನಡೆಸ್ತಿದೆ. ಬುಕ್‌ಮೈ ಶೋನಲ್ಲಿ ಗಂಟೆಗೆ 8 ಸಾವಿರ ಟಿಕೆಟ್ ಬುಕ್ ಆಗಿ 'ಪ್ರೇಮದ ಊರಲಿ' ಚಿತ್ರ ದಾಖಲೆ ಬರೆದಿದೆ. ಈ ವರ್ಷ 'ಟಾಕ್ಸಿಕ್' ಬಿಟ್ಟು ಕನ್ನಡದ ಯಾವುದೇ ಚಿತ್ರಕ್ಕೆ ಈ ಮಟ್ಟಿಗೆ ಟಿಕೆಟ್ ಬುಕ್ ಆಗಿಲ್ಲ. ಮುಂದಿನ ಮೂರು ತಿಂಗಳಲ್ಲಿ ಕೂಡ ಈ ದಾಖಲೆ ಅಳಿಸುವುದು ಕಷ್ಟ ಎನ್ನುವಂತಾಗಿದೆ.

ದೊಡ್ಡ ಚಿತ್ರಗಳಿಗೆ ಸೆಡ್ಡು

ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್ ಲೆಕ್ಕ ಕೊಡಲು ಆರಂಭಿಸಿದ ಬಳಿಕ ಗಂಟೆಗೆ ಅತಿ ಹೆಚ್ಚು ಟಿಕೆಟ್ ಬುಕ್ಕಿಂಗ್ ಲೆಕ್ಕಾಚಾರದಲ್ಲಿ ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ ಮೊದಲ ಸ್ಥಾನದಲ್ಲಿದೆ. ಆ ಚಿತ್ರಕ್ಕೆ ಗಂಟೆಗೆ 11 ಸಾವಿರ ಟಿಕೆಟ್ ಬುಕ್ ಆಗಿತ್ತು. ಎರಡನೇ ಸ್ಥಾನದಲ್ಲಿ 'ಸು ಫ್ರಂ ಸೋ'(10,880), ಮೂರನೇ ಸ್ಥಾನದಲ್ಲಿ 'ಕಾಟೇರ'(10,130), ನಾಲ್ಕನೇ ಸ್ಥಾನದಲ್ಲಿ 'ಮ್ಯಾಕ್ಸ್'(8,930) ಹಾಗೂ ಐದನೇ ಸ್ಥಾನದಲ್ಲಿ 'ಯುಐ'(8,330) ಸಿನಿಮಾ ಜಾಗ ಮಾಡಿಕೊಂಡಿದೆ. ಇದೀಗ 'ಪ್ರೇಮದ ಊರಲಿ' ಆರನೇ ಸ್ಥಾನದಲ್ಲಿದೆ. ಯಾವುದೇ ಸ್ಟಾರ್‌ಗಳಿಲ್ಲದ ಕಡಿಮೆ ಬಜೆಟ್ ಸಿನಿಮಾ, ಸಿಕ್ಕಿರುವ ಶೋಗಳ ಸಂಖ್ಯೆ ಬಹಳ ಕಮ್ಮಿಯಿದೆ. ಆದರೂ ಈ ಚಿತ್ರಕ್ಕೆ ಇಷ್ಟರಮಟ್ಟಿಗೆ ಟಿಕೆಟ್ ಬುಕ್ ಆಗ್ತಿರುವುದು ದಾಖಲೆ ಅಲ್ಲದೇ ಮತ್ತೇನು.

ತೆಲುಗಿಗೂ ಡಬ್

ಇಂದಿನಿಂದ(ಅಕ್ಟೋಬರ್ 2) ತೆಲುಗಿಗೂ 'ಪ್ರೇಮದ ಊರಲಿ' ಸಿನಿಮಾ ಡಬ್ ಆಗಿ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಆಗ್ತಿದೆ. ಸಾಯಿಕುಮಾರ್ ಕೂಡ ಚಿತ್ರಕ್ಕೆ ಶುಭ ಕೋರಿದ್ದಾರೆ. ಈ ವಾರ ಕನ್ನಡದ 'ಬೇಲ್', ತಮಿಳಿನ 'ಸಿಗ್ಮಾ', ಬಾಲಿವುಡ್ 'ದೃಶ್ಯಂ'- 3 ಹಾಗೂ ಮಲಯಾಳಂನ 'ಡೋಂಟ್ ಟ್ರಬಲ್ ದಿ ಟ್ರಬಲ್' ಚಿತ್ರಗಳ ನಡುವೆ 'ಪ್ರೇಮದ ಊರಲಿ' ಚಿತ್ರ ಪ್ರದರ್ಶನ ಕಾಣಬೇಕಿದೆ.

ಬಾಕ್ಸಾಫೀಸ್

ಬಹಳ ಕಡಿಮೆ ಬಜೆಟ್ ಸಿನಿಮಾ ಇದು. ಮೊದಲ ದಿನ ಗಳಿಸಿದ್ದು 13 ಲಕ್ಷ ರೂ. ಮಾತ್ರ.. ಆದರೆ ಆರನೇ ದಿನ ಸಿನಿಮಾ 1.74 ಕೋಟಿ ರೂ. ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಒಟ್ಟಾರೆ ಚಿತ್ರತಂಡ ಖುಷಿಯಾಗಿದೆ.