ಮನೋಜ್ ಕುಮಾರ್ ನಿರ್ದೇಶನದ 'ಪ್ರೇಮದ ಊರಲಿ' ಸಿನಿಮಾ ಹೊಸ ಹೊಸ ದಾಖಲೆ ಬರೆದು ಮುನ್ನುಗ್ಗುತ್ತಿದೆ. ಈ ವರ್ಷ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ ಬರೆಯಲು ಸಜ್ಜಾಗಿದೆ. ಇದೆಲ್ಲದರ ನಡುವೆ ಬುಕ್ಮೈಶೋನಲ್ಲಿ 'ಟಾಕ್ಸಿಕ್' ಚಿತ್ರದ ಅದೊಂದು ದಾಖಲೆಯನ್ನು 'ಪ್ರೇಮದ ಊರಲಿ' ಮುರಿದಿದೆ.
ದಿನದಿಂದ ದಿನಕ್ಕೆ 'ಪ್ರೇಮದ ಊರಲಿ' ಸಿನಿಮಾ ಗೆಲುವಿನ ಆರ್ಭಟ ಮುಂದುವರೆದಿರುವುದು ಗೊತ್ತೇತಿದೆ. ಇವತ್ತಿಗೂ ಸಿನಿಮಾ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಈ ವಾರ 'ಜೈಲರ್- 2' ಹಾಗೂ 'ರಣಬಾಲಿ' ಸಿನಿಮಾ ಬಿಡುಗಡೆ ಆಗುತ್ತಿರುವುದು ಕೊಂಚ ಹಿನ್ನಡೆ ಆಗುವಂತೆ ಮಾಡಿದೆ. ಸಿಂಗಲ್ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಆ ಸಿನಿಮಾಗಳ ಜೊತೆ ಶೋಗಳನ್ನು ಹಂಚಿಕೊಳ್ಳುವಂತಾಗಿದೆ. ನಿಧಾನವಾಗಿ ಸಿನಿಮಾ ಆಟ ಮುಗಿಸುವಂತ ಸಾಗುತ್ತಿರುವುದು ಟಿಕೆಟ್ ಬುಕ್ಕಿಂಗ್ ನೋಡಿದ್ರೆ ಅರ್ಥವಾಗ್ತಿದೆ.
21ನೇ ದಿನ ರೆಸ್ಪಾನ್ಸ್
'ಪ್ರೇಮದ ಊರಲಿ' ಸಿನಿಮಾ ತೆರೆಕಂಡು 20 ದಿನ ಕಳೆದಿದೆ. 21ನೇ ದಿನವೂ ಗಂಟೆಗೆ 5 ಸಾವಿರ ಟಿಕೆಟ್ ಬುಕ್ ಆಗ್ತಿದೆ. ಈ ವೀಕೆಂಡ್ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಈಗಾಗಲೇ ಸಿನಿಮಾ ಕಲೆಕ್ಷನ್ 75 ಕೋಟಿ ರೂ. ಗಡಿ ದಾಟಿದೆ. ಶೀಘ್ರದಲ್ಲೇ 100 ಕೋಟಿ ರೂ. ಕ್ಲಬ್ ಸೇರಿದ್ರು ಅಚ್ಚರಿಪಡಬೇಕಿಲ್ಲ.
'ಟಾಕ್ಸಿಕ್' ದಾಖಲೆ ಉಡೀಸ್
ಅಂದಹಾಗೆ 'ಪ್ರೇಮದ ಊರಲಿ' ಸಿನಿಮಾ ಓಪನಿಂಗ್ ಚೆನ್ನಾಗಿ ಇರಲಿಲ್ಲ. ಬಳಿಕ ನಿಧಾನವಾಗಿ ಮೌತ್ ಟಾಕ್ ಮೂಲಕ ಸಿನಿಮಾ ಗೆಲ್ತಾ ಹೋಯ್ತು. ಎರಡನೇ ವಾರ ಸಿನಿಮಾ ಆರ್ಭಟ ಹೆಚ್ಚಾಯ್ತು. ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ಮೈಶೋನಲ್ಲಿ ಬುಕ್ ಆಗಲು ಪ್ರಾರಂಭವಾಯ್ತು. ಬಳಿಕ ಅದು 2.50 ಲಕ್ಷ ದಾಟಿತ್ತು. ಹೀಗೆ ಸತತ 13 ದಿನಗಳಿಂದ ಪ್ರತಿದಿನ ಚಿತ್ರಕ್ಕೆ 1 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿದೆ. ಈ ಮೂಲಕ 12 ದಿನ 1 ಲಕ್ಷ ಟಿಕೆಟ್ ಬುಕ್ಕಿಂಗ್ ಆಗಿ ಸದ್ದು ಮಾಡಿದ್ದ 'ಟಾಕ್ಸಿಕ್' ಸಿನಿಮಾ ದಾಖಲೆ ಅಳಿಸಿ ಹೋಗಿದೆ. ಆದರೆ ರಿಷಬ್ ಶೆಟ್ಟಿ ನಟನೆಯ 'ಕಾಂತಾರ- 1' ಚಿತ್ರಕ್ಕೆ 27 ದಿನ ನಿರಂತರವಾಗಿ 1 ಲಕ್ಷ ಟಿಕೆಟ್ ಬುಕ್ ಆಗಿದ್ದು ವಿಶೇಷ.