ಮನೋಜ್ ಕುಮಾರ್ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್ 'ಪ್ರೇಮದ ಊರಲಿ' ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಸಾಮಾನ್ಯವಾಗಿ ವಾರಾಂತ್ಯದ ಬಳಿಕ ವಾರದ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಕಮ್ಮಿ ಆಗುತ್ತದೆ. ಆದರೆ ಈ ಹೊಸಬರ ಸಿನಿಮಾ ಆ ಮಾತು ಸುಳ್ಳಾಗಿಸಿ ಸದ್ದು ಮಾಡ್ತಿದೆ. ಸೋಮವಾರಕ್ಕಿಂತ ಮಂಗಳವಾರ ಕಲೆಕ್ಷನ್ ಜಾಸ್ತಿ ಆಗಿರುವುದು ಅದಕ್ಕೆ ಸ್ಪಷ್ಟ ನಿದರ್ಶನ.
ದಿನದಿಂದ ದಿನಕ್ಕೆ 'ಪ್ರೇಮದ ಊರಲಿ' ಸಿನಿಮಾ ಕಲೆಕ್ಷನ್ ಹೆಚ್ಚಾಗ್ತಿದೆ. ಶೋಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ದೊಡ್ಡ ಸಿನಿಮಾಗಳಿಗೆ ಹೋಲಿಸಿದರೆ ಕಡಿಮೆ ಶೋಗು ಸಿಕ್ಕಿವೆ. ಹಾಗಾಗಿ ಕೆಲವೆಡೆ ಟಿಕೆಟ್ ಸಿಗದೇ ಪ್ರೇಕ್ಷಕರು ಪರದಾಡುತ್ತಿದ್ದಾರೆ. ಕ್ಯೂ ನಿಂತು ಟಿಕೆಟ್‌ಗಾಗಿ ತಳ್ಳಾಟ ನೂಕಾಟ ನಡೀತಿದೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಸೆಡ್ಡು ಹೊಡೆದು 'ಪ್ರೇಮದ ಊರಲಿ' ಸವಾರಿ ಮುಂದುವರೆದಿದೆ.
12ನೇ ದಿನದ ಗಳಿಕೆ
ಎರಡನೇ ವಾರ 'ಪ್ರೇಮದ ಊರಲಿ' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. 12ನೇ ದಿನವಾದ ನಿನ್ನೆ ಮಂಗಳವಾರ ಸಿನಿಮಾ ₹3.65 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈಗಾಗಲೇ ಸಿನಿಮಾ 25 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ.
ದೃಶ್ಯಂ-3ಗೂ ಸೆಡ್ಡು
ಅಜಯ್ ದೇವಗನ್ ನಟನೆಯ 'ದೃಶ್ಯಂ-3' ಸಿನಿಮಾ ಈ ವಾರ ಬಿಡುಗಡೆಯಾಗಿದೆ. ದೇಶಾದ್ಯಂತ ಸಾವಿರಾರು ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಾಣ್ತಿದೆ. ಮಲಯಾಳಂ 'ದೃಶ್ಯಂ- 3' ಚಿತ್ರಕ್ಕಿಂತಲೂ ಒಳ್ಳೆ ಸಿನಿಮಾ ಎಂದು ಪ್ರೇಕ್ಷಕರು, ವಿಮರ್ಶಕರು ಹೇಳ್ತಿದ್ದಾರೆ. ಆದರೆ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಈ ಚಿತ್ರವನ್ನು ಕನ್ನಡದ 'ಪ್ರೇಮದ ಊರಲಿ' ಹಿಂದಿಕ್ಕಿದೆ. ಬುಕ್‌ಮೈ ಶೋನಲ್ಲಿ ಗಂಟೆಗೆ ಎಷ್ಟು ಟಿಕೆಟ್ ಬುಕ್ ಆಗುತ್ತದೆ ಎನ್ನುವ ಲೆಕ್ಕ ಸಿಗುತ್ತದೆ. ಇದರಲ್ಲಿ 'ಪ್ರೇಮದ ಊರಲಿ' ಸಿನಿಮಾ ಟ್ರೆಂಡಿಂಗ್‌ನಲ್ಲಿದೆ.
ಎಲ್ಲೆಡೆ ಹೌಸ್‌ಫುಲ್
ಬರೀ ಮಲ್ಟಿಪ್ಲೆಕ್ಸ್ ಹಾಗೂ ನಗರದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮಾತ್ರವಲ್ಲ ಸಿ ಸೆಂಟರ್‌ಗಳಲ್ಲಿ ಕೂಡ 'ಪ್ರೇಮದ ಊರಲಿ' ಸಿನಿಮಾ ಆರ್ಭಟ ಜೋರಾಗಿದೆ. ಹಳ್ಳಿಗಳಲ್ಲಿ ಜನ ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಹಾಗಾಗಿ ಸಿನಿಮಾ 50 ಕೋಟಿ ಅಲ್ಲ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ರು, ಅಚ್ಚರಿ ಪಡಬೇಕಿಲ್ಲ ಎನ್ನಲಾಗ್ತಿದೆ. ಈ ಶುಕ್ರವಾರ ಉತ್ತರ ಭಾರತ ಸೇರಿದಂತೆ ವಿದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.