ಎರಡು ವರ್ಷಗಳ ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಬಗ್ಗೆ ಪ್ರದೋಷ್ ನ್ಯಾಯಾಲಯದ ಮುಂದೆ ವಿವರಿಸಿದ್ದಾನೆ. ರೇಣುಕಾಸ್ವಾಮಿ ಮೃತಪಟ್ಟ ದಿನ ಏನೆಲ್ಲಾ ಆಯ್ತು ಎಂದು ಹೇಳಿದ್ದಾನೆ. ಪವಿತ್ರಾ ಗೌಡ ಕಾಲು ಮುಟ್ಟಬೇಡ ಎಂದು ಅಶ್ಲೀಲ ಪದಗಳನ್ನು ಬೈದು ದರ್ಶನ್ ಥಳಿಸಿದ್ದಾಗಿ ಪ್ರದೋಷ್ ತಿಳಿಸಿದ್ದಾನೆ.

ಅಂದು ದರ್ಶನ್ ಮನೆಗೆ ಹೋಗಿದ್ದು ಬಳಿಕ ಅಲ್ಲಿಂದ ತನ್ನದೇ ಕಾರಿನಲ್ಲಿ ದರ್ಶನ್ ಕರೆದುಕೊಂಡು ಸ್ಟೋನಿ ಬ್ರೂಕ್ ರೆಸ್ಟೊರೆಂಟ್‌ಗೆ ಹೋಗಿದ್ದನ್ನು ಪ್ರದೋಷ್ ನೆನಪಿಸಿಕೊಂಡಿದ್ದಾನೆ. ಪಾರ್ಟಿ ಬಳಿಕ ಪವಿತ್ರಾ ಗೌಡ ಮನೆಗೆ ಹೋಗಿ ಅಲ್ಲಿಂದ ಆಕೆಯನ್ನು ಕರೆದುಕೊಂಡು ಪಟ್ಟಣಗೆರೆ ಶೆಡ್‌ಗೆ ಹೋಗಿದ್ದೆವು. ಪವಿತ್ರಾಗೆ ರೇಣುಕಾಸ್ವಾಮಿ ಕಳಿಸಿದ್ದ ಅಶ್ಲೀಲ ಮೆಸೇಜ್ ಓದಿ ದರ್ಶನ್ ಮುಂದೆ ಹೇಳಿದರು. ಕೂಡಲೇ ರೇಣುಕಾಸ್ವಾಮಿ ಬಟ್ಟೆ ಬಿಚ್ಚಿ ಬೆತ್ತಲಾಗಿಸಿ ಪವನ್, ನಂದೀಶ್ ಜೊತೆ ಸೇರಿ ದರ್ಶನ್ ಥಳಿಸಿದರು. ಆತನ ಮರ್ಮಾಂಗಕ್ಕೆ ದರ್ಶನ್ ಕಾಲಿನಿಂದ ಒದ್ದರು ಎಂದು ಪ್ರದೋಷ್ ಹೇಳಿದ್ದಾನೆ.

ನಾನು ಯಾರು ಗೊತ್ತಾ? ಇವ್ರು(ಪವಿತ್ರಾ ಗೌಡ) ಯಾರು ಗೊತ್ತಾ? ಇವಳು ನನ್ನ ಹೆಂಡತಿ. ಇವಳಿಗೆ ಅಶ್ಲೀಲ ಮೆಸೇಜ್ ಮಾಡುವಷ್ಟು ಧೈರ್ಯಾನಾ? ಎಂದು ರೇಣುಕಾಸ್ವಾಮಿಗೆ ದರ್ಶನ್ ಕಾಲಿನಿಂದ ಒದ್ದರು. ಕಾಲಿಗೆ ಬಿದ್ದು ಕ್ಷಮೆ ಕೇಳು ಎಂದು ದರ್ಶನ್ ಹೇಳಿದ್ದ. ರೇಣುಕಾಸ್ವಾಮಿ ಕಾಲು ಹಿಡಿದು ಕ್ಷಮೆ ಕೇಳಲು ಮುಂದಾದಾಗ "ಪವಿತ್ರಾ ಕಾಲು ಮುಟ್ಟಿದ್ದೀನಿ ಅಂತ ಊರ್ ತುಂಬಾ ಹೇಳ್ಕೊಂಡು ಸುತ್ತಾಡ್ತೀಯಾ", ಬೇಡ ನೆಲ ಮುಟ್ಟಿ ಕ್ಷಮೆ ಕೇಳು ಎಂದು ದರ್ಶನ್ ಕೆಟ್ಟದಾಗಿ ಬೈದ ಎಂದು ಪ್ರದೋಷ್ ತಿಳಿಸಿದ್ದಾನೆ.