ಸಿನಿಮಾ ಅನ್ನೋದು ಮಾಯಾಲೋಕ. ಇಲ್ಲಿದೆ ಕೋಟಿ ಕೋಟಿ ಗಳಿಸಿದವರು ಇದ್ದಾರೆ. ಮನೆ ಮಠ ಕಳೆದುಕೊಂಡವರು ಸಿಗ್ತಾರೆ. ಒಮ್ಮೆ ಸಿನಿಮಾ ಹುಚ್ಚು ಹತ್ತಿಬಿಟ್ಟರೆ ಸಾಮಾನ್ಯಕ್ಕೆ ಹೋಗುವಂಥದ್ದಲ್ಲ. ಪ್ರಭಾಸ್ ನಟನೆಯ 'ಮಿರ್ಚಿ' ಸಿನಿಮಾ ಟಿಕೆಟ್ ಕೊಡಲಿಲ್ಲ ಅಂತ ಮುಂದೆ ಆ ಚಿತ್ರಮಂದಿರವನ್ನೇ ಕೊಂಡುಕೊಂಡುಬಿಟ್ಟೆ ಎಂದು ತೆಲುಗು ನಿರ್ಮಾಪಕ ಕಂಡ್ರೇಗುಲ ನಾಯ್ಡು ಹೇಳಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಪ್ರಭಾಸ್ ಸಿನಿಮಾಗಳಿಗಿರುವ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅವರು ಮೆರೆಯುತ್ತಿದ್ದಾರೆ. ಅವರ ಸಿನಿಮಾ ಬಿಡುಗಡೆ ಸಮಯದಲ್ಲಿ ಟಿಕೆಟ್‌ಗಾಗಿ ಅಭಿಮಾನಿಗಳು ಮುಗಿಬೀಳ್ತಾರೆ. ಇತ್ತೀಚೆಗೆ ಬುಕ್‌ಮೈಶೋ ಜಮಾನ ನಡೀತಿದೆ. ಕೊಂಚು ಹೆಚ್ಚು ಹಣ ಕೊಟ್ಟು ಟಿಕೆಟ್ ಬುಕ್ ಮಾಡಬಹುದು. ದಶಕದ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ. ಎಲ್ಲರ ಬಳಿ ಮೊಬೈಲ್, ಇಂಟರ್‌ನೆಟ್ ಇಲ್ಲದ ಕಾಲ. ಆಗ ಚಿತ್ರಮಂದಿರಕ್ಕೆ ಹೋಗಿ ಟಿಕೆಟ್ ಖರೀದಿಸಬೇಕಿತ್ತು. ಇಲ್ಲದಿದ್ದರೆ ಬ್ಲಾಕ್‌ನಲ್ಲಿ ಕೊಂಡುಕೊಳ್ಳಬೇಕು. ಸಾಧ್ಯವಾಗಿದ್ದರೆ ರೆಕಮಂಡ್ ಮಾಡಿಸಿ ಚಿತ್ರಮಂದಿರದಿಂದ ಟಿಕೆಟ್ ಪಡೆಯಬೇಕಿತ್ತು. ಅದುಬಿಟ್ಟರೆ ಅಷ್ಟು ಸುಲಭವಾಗಿ ಟಿಕೆಟ್ ಸಿಗುತ್ತಿರಲಿಲ್ಲ.
ಈ ವಾರ ಕಂಡ್ರೇಗುಲ ನಾಯ್ಡು ನಿರ್ಮಾಣದ 'ಅನಕಾಪಲ್ಲಿ' ಎಂಬ ತೆಲುಗು ಸಿನಿಮಾ ಬಿಡುಗಡೆ ಆಗ್ತಿದೆ. ಚಿತ್ರದ ಪ್ರಚಾರದ ಭಾಗವಾಗಿ ನಿರ್ಮಾಪಕ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. "ಪ್ರಭಾಸ್ ನಟನೆಯ 'ಮಿರ್ಚಿ' ಚಿತ್ರಕ್ಕೆ ಆಗ ಭಾರೀ ಕ್ರೇಜ್ ಇತ್ತು. ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಮುಗಿಬಿದ್ದಿದ್ದರು. ನಾವು ನಮ್ಮ ಕುಟುಂಬ ಸಮೇತ ಅನಕಪಲ್ಲಿಯಲ್ಲಿರುವ ವೆಂಕಟೇಶ್ವರ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗಿದ್ದೆವು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಟಿಕೆಟ್‌ಗಾಗಿ ನಮ್ಮನ್ನು ಕಾಯಿಸಿದ್ದರು. ಆಗ ನಾನು ಈ ಚಿತ್ರಮಂದಿರವನ್ನು ಖರೀದಿಸಬೇಕು ಎಂದು ನಿರ್ಧರಿಸಿದೆ. ಮುಂದೆ ಅದು ನಿಜವಾಯ್ತು. ಈಗ ನಾನು ನಿರ್ಮಿಸಿದ 'ಅನಕಪಲ್ಲಿ' ಸಿನಿಮಾ ಅದೇ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದು ಸಂತೋಷ ತಂದಿದೆ" ಎಂದಿದ್ದಾರೆ.
ರವಿತೇಜ ನಟನೆಯ 'ಭಗೀರಥ' ಸಿನಿಮಾದಿಂದ ಪ್ರೇರಣೆಗೊಂಡು ನಾನು ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡಿಕೆ ಮಾಡಿದ್ದೆ. ಚಿತ್ರದ ನಾಯಕ ಹೇಗೆ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೋ ಅದೇ ರೀತಿ ನಾನು ಗೆಲುವು ಕಂಡೆ ಎಂದು ನಿರ್ಮಾಪಕ ಕಂಡ್ರೇಗುಲ ನಾಯ್ಡು ಹೇಳಿರುವುದು ವೈರಲ್ ಆಗ್ತಿದೆ.
Producer #KandregulaNaidu Garu how he bought the theatre in #Anakapalli pic.twitter.com/h6gkGUzcRS
— Sai Satish (@PROSaiSatish) October 1, 2026