ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗುತ್ತಲೇ ಇದೆ. ಸಣ್ಣ ಸಿನಿಮಾ ನೋಡೋಕೆ ಜನ ಬರಲ್ಲ, ಮಾಡಿದ್ರೆ ದೊಡ್ಡ ಸಿನಿಮಾ ಮಾಡ್ಬೇಕು ಎನ್ನುವ ಲೆಕ್ಕಾಚಾರ ಚಿತ್ರರಂಗದಲ್ಲಿದೆ. ಆದರೆ ಸ್ಟಾರ್ ನಟರ ಸಿನಿಮಾಗಳನ್ನು ಅಷ್ಟು ಸುಲಭವಾಗಿ ತೆರೆಗೆ ತರೋಕೆ ಆಗಲ್ಲ. ಹಾಗಾಗಿ ಪದೇ ಪದೆ ರಿಲೀಸ್ ಮುಂದೂಡುವಂತಾಗಿದೆ. ಪ್ರಭಾಸ್ ನಟನೆಯ 'ಫೌಜಿ' ಸಿನಿಮಾ ಬಿಡುಗಡೆ ತಡವಾಗ್ತಿದೆ.

ಡಿಸೆಂಬರ್ 3ರಂದು 'ಫೌಜಿ' ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡವೇ ಘೋಷಿಸಿತ್ತು. ಆದರೆ ಅದು ಸುಳ್ಳಾಗಿದೆ. ಕಳೆದ ಕೆಲ ದಿನಗಳಿಂದ ಸಿನಿಮಾ ರಿಲೀಸ್ ಡೇಟ್ ಬದಲಾಗುವ ಬಗ್ಗೆ ಊಹಾಪೋಹ ಶುರುವಾಗಿತ್ತು. ಇದೀಗ ನಿರ್ಮಾಪಕರೇ ಆ ವಿಚಾರ ಸ್ಪಷ್ಟಪಡಿಸಿದ್ದಾರೆ. ನಾನಿ ನಟನೆಯ 'ದಿ ಪ್ಯಾರಡೈಸ್' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ನಿರ್ಮಾಪಕ ರವಿ ಶಂಕರ್ ಭಾಗಿ ಆಗಿದ್ದರು. ವೇದಿಕೆಯಲ್ಲಿ ಮಾತನಾಡುತ್ತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಹೌದು, 'ಫೌಜಿ' ಸಿನ್ಮಾ ಬಿಡುಗಡೆ ತಡವಾಗಲಿದೆ. ಆದ್ರೆ ಅದು ಬೇರೆ ಲೆವೆಲ್ ಸಿನ್ಮಾ.. ಬಾಹುಬಲಿ ಬಳಿಕ ಪ್ರಭಾಸ್ ಅವರನ್ನು ಅಷ್ಟು ಅದ್ಭುತವಾಗಿ ನೋಡಿಲ್ಲ. ಅಷ್ಟರಮಟ್ಟಿಗೆ ಈ ಸಿನ್ಮಾ ನಿಮ್ಮನ್ನು ರಂಜಿಸಲಿದೆ" ಎಂದಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ 'ಫೌಜಿ' ಸಿನಿಮಾ ತಯಾರಾಗ್ತಿದೆ. 'ಸೀತಾರಾಮಂ' ಸಿನಿಮಾ ಖ್ಯಾತಿಯ ಹನು ರಾಘವಪುಡಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ತೆರೆಗೆ ತರಲಾಗ್ತಿದೆ. ಇಮನ್ವಿ ಇಸ್ಮಾಯಿಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಬ್ರಿಟೀಷರ ಕಾಲದ ಕಥೆಯನ್ನು ಹೇಳುವ ಪ್ರಯತ್ನ ನಡೀತಿದೆ. ಅದಕ್ಕಾಗಿ ಭಾರೀ ಸೆಟ್ ಹಾಕಿ ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೀತಿದೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಪ್ರಭಾಸ್ ಜೊತೆಗೆ ಜಯಪ್ರದ, ಮಿಥುನ್ ಚಕ್ರವರ್ತಿ, ಅನುಪಮ್ ಕೇರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕನ್ನಡ ನಟಿ ಚೈತ್ರಾ ಜೆ ಆಚಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಫೌಜಿ' ಚಿತ್ರಕ್ಕೆ ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಅಂದಾಜು 400-500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ 180 ಕೋಟಿ ರೂ. ಕೊಟ್ಟು ಚಿತ್ರದ ಓಟಿಟಿ ರೈಟ್ಸ್ ಅನ್ನು ನೆಟ್‌ಫ್ಲಿಕ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ.