ಡಾಲಿ ಪಿಚ್ಚರ್ಸ್ ನಿರ್ಮಾಣದ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಮದರ್ ಪ್ರಾಮೀಸ್' ಬಳಿಕ 'ಹೆಗ್ಗಣ ಮುದ್ದು' ಎಂಬ ಹೊಸ ಕಥೆಯನ್ನು ಧನು ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಮೊದಲ ನೋಟದಲ್ಲೇ ಗಮನ ಸೆಳೆಯುತ್ತಿದೆ. ಸೆಪ್ಟೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದೆ.
"ಹೆತ್ತವರಿಗೆ ಹೆಗ್ಗಣ ಮುದ್ದು" ಎನ್ನುವ ಗಾದೆ ಮಾತಿನಿಂದ ಪ್ರೇರಣೆಗೊಂಡು ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಕೌಟುಂಬಿಕ ಡ್ರಾಮಾ ಮತ್ತು ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದೆ. ಹೊಸದಾಗಿ ಮದುವೆ ಆದ ದಂಪತಿ ಸಂಬಂಧಗಳ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. ಅವಿನಾಶ್ ಬಲೆಕ್ಕಳ ನಿರ್ದೇಶನದ ಮೊದಲ ಸಿನಿಮಾ ಇದು. ಧನಂಜಯ್ ಸ್ನೇಹಿತ ಪೂರ್ಣಚಂದ್ರ ಮೈಸೂರು ಹಾಗೂ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.
ಈ ಹಿಂದೆ 'ವೇದ' ಚಿತ್ರದಲ್ಲಿ ಕನಕ ಪಾತ್ರದ ಮೂಲಕ ಅದಿತಿ ಗಮನ ಸೆಳೆದಿದ್ದರು. ಗಾಯಕಿಯಾಗಿ ಒಂದಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ನಾಯಕಿಯಾಗಿ ಇದು ಅವರ ಮೊದಲ ಪ್ರಯತ್ನ. ಚಿತ್ರಕ್ಕೆ ಕಾರ್ತಿಕ್ ಚೆನ್ನೂಜಿ ರಾವ್ ಹಾಗೂ ರೋಣದ ಬಕ್ಕೆಶ್ ಸಂಗೀತ ಸಂಯೋಜನೆ, ನಚಿಕೇತ್ ಬಲೆಕ್ಕಳ ಛಾಯಾಗ್ರಹಣವಿದೆ. ಕಡಿಮೆ ಬಜೆಟ್‌ನಲ್ಲಿ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ.