ಚೆಕ್ ಬೌನ್ಸ್ ಪ್ರಕರಣದಲ್ಲಿ ತೆಲುಗು ನಿರ್ಮಾಪಕ, ಹಾಸ್ಯ ನಟ ಬಂಡ್ಲ ಗಣೇಶ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಂಧ್ರದ ಒಂಗೋಲು ನ್ಯಾಯಾಲಯ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಬಂಡ್ಲ ಗಣೇಶ್‌ಗೆ 95 ಲಕ್ಷ ರೂ. ದಂಡ ವಿಧಿಸಿದ್ದು, ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ನ್ಯಾಯಾಲಯದ ಖರ್ಚುಗಳನ್ನು ಭರಿಸುವಂತೆ ಆದೇಶಿಸಿದೆ.
ಪವನ್ ಕಲ್ಯಾಣ್ ನಟನೆಯ 'ಗಬ್ಬರ್ ಸಿಂಗ್', 'ತೀನ್‌ಮಾರ್' ಸೇರಿದಂತೆ ಕೆಲ ಸ್ಟಾರ್ ನಟರ ಸಿನಿಮಾಗಳನ್ನು ಬಂಡ್ಲ ಗಣೇಶ್ ನಿರ್ಮಿಸಿದ್ದರು. 'ಗಬ್ಬರ್ ಸಿಂಗ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 90ರ ದಶಕದಲ್ಲೇ ಚಿತ್ರರಂಗ ಪ್ರವೇಶಿಸಿದ ಅವರು ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.
2018ರಲ್ಲಿ ಬಂಡ್ಲ ಗಣೇಶ್ ಅವರು ಪ್ರಕಾಶಂ ಜಿಲ್ಲೆಯ ಜಾನಕಿ ರಾಮಯ್ಯ ಎಂಬುವವರಿಂದ 95 ಲಕ್ಷ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಜಾನಕಿ ರಾಮಯ್ಯ ನಿಧನದ ಬಳಿಕ ಅವರ ತಂದೆ ಜೆಟ್ಟಿ ವೆಂಕಟೇಶ್ವರ ರಾವ್ ಅವರಿಗೆ ಬಂಡ್ಲ ಗಣೇಶ್ ಚೆಕ್ ನೀಡಿದ್ದರು. ತಮ್ಮ'ಪರಮೇಶ್ವರ ಆರ್ಟ್ಸ್ ಪ್ರೊಡಕ್ಷನ್ಸ್' ಚಿತ್ರ ನಿರ್ಮಾಣ ಸಂಸ್ಥೆ ಹೆಸರಿನಲ್ಲಿ ನೀಡಿದ್ದ ಚೆಕ್ ಬ್ಯಾಂಕ್‌ನಲ್ಲಿ ಹಣದ ಕೊರತೆಯಿಂದ ಬೌನ್ಸ್ ಆಗಿತ್ತು. ಹಾಗಾಗಿ ಜೆಟ್ಟಿ ವೆಂಕಟೇಶ್ವರ ರಾವ್ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಬಂಡ್ಲ ಗಣೇಶ್ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಒಂದು ವರ್ಷ ಸಾಮಾನ್ಯ ಜೈಲು ಶಿಕ್ಷೆ ವಿಧಿಸಿದ್ದು ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಬಂಡ್ಲ ಗಣೇಶ್ ಅವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ನ್ಯಾಯಾಲಯ ಆದೇಶದ ಬಗ್ಗೆ ಅವರು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಸಂವಿಧಾನ, ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯ ಬಗ್ಗೆ ನನಗೆ ಗೌರವವಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಪ್ರತಿಯೊಂದು ವ್ಯವಸ್ಥೆಗೂ ವಿಶಿಷ್ಟ ಗೌರವ ಮತ್ತು ಜವಾಬ್ದಾರಿ ಇದೆ. ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ಮತ್ತು ಅಲ್ಲಿಂದ ಸುಪ್ರೀಂ ಕೋರ್ಟ್‌ಗೆ ನ್ಯಾಯ ಪಡೆಯಲು ಸಂವಿಧಾನವು ನಮಗೆ ಅವಕಾಶ ನೀಡಿದೆ. ನ್ಯಾಯಾಂಗದಲ್ಲಿ ಪೂರ್ಣ ನಂಬಿಕೆ ಮತ್ತು ಕಾನೂನಿನ ಮೇಲಿನ ಗೌರವದೊಂದಿಗೆ ಮುಂದುವರಿಯುವುದು ನನ್ನ ನಂಬಿಕೆ ಎಂದು ಬಂಡ್ಲ ಗಣೇಶ್ ಟ್ವೀಟ್ ಮಾಡಿದ್ದಾರೆ.
1996ರಲ್ಲಿ 'ವಿನೋದಂ' ಎಂಬ ಸಿನಿಮಾ ಮೂಲಕ ಬಂಡ್ಲ ಗಣೇಶ್ ಚಿತ್ರರಂಗ ಪ್ರವೇಶಿಸಿದ್ದರು. ರವಿತೇಜ ನಟನೆಯ 'ಆಂಜನೇಯಲು' ಚಿತ್ರವನ್ನು ಮೊದಲಿಗೆ ನಿರ್ಮಿಸಿದ್ದರು. 'ಬಾದ್‌ಶಾ', 'ಗೋವಿಂದುಡು ಅಂದರಿವಾಡೆಲೆ', 'ಟೆಂಪರ್' ಅವರು ನಿರ್ಮಿಸಿದ ಸಿನಿಮಾಗಳು.
భారత రాజ్యాంగం, న్యాయవ్యవస్థ, పోలీసు వ్యవస్థలపై నాకు అపారమైన గౌరవం ఉంది. మన ప్రజాస్వామ్య వ్యవస్థలో ప్రతి వ్యవస్థకు ఒక ప్రత్యేకమైన గౌరవం, బాధ్యత ఉన్నాయి. జిల్లా కోర్టు నుంచి హైకోర్టు, అక్కడి నుంచి సుప్రీంకోర్టు వరకు న్యాయం కోరేందుకు రాజ్యాంగం మనకు అవకాశం కల్పించింది.…
— BANDLA GANESH. (@ganeshbandla) November 18, 2026