ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಹಾಗೂ 3ನೇ ಪತ್ನಿ ಅನ್ನಾ ಲೆಜ್ನೆವಾ ದೂರಾಗುತ್ತಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಬ್ಬರು ಪರಸ್ಪರ ಒಪ್ಪಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ಇಬ್ಬರೂ ಜಂಟಿಯಾಗಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
"ನಮ್ಮ ಹಿತೈಷಿಗಳಿಗೆ, ಆಪ್ತರಿಗೆ ಮತ್ತು ಪ್ರೀತಿಪಾತ್ರರಿಗೆ... ನಮ್ಮ ಜೀವನದ ಒಂದು ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ನಂತರ, ಪರಸ್ಪರ ತಿಳುವಳಿಕೆ ಹಾಗೂ ಗೌರವದೊಂದಿಗೆ ಬೇರ್ಪಡಲು ನಾವು ನಿರ್ಧರಿಸಿದ್ದೇವೆ. ನಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿಯೇ ಉಳಿಯುತ್ತೇವೆ ಮತ್ತು ನಮ್ಮ ಅದ್ಭುತ ಮಕ್ಕಳಿಗೆ ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮೆಲ್ಲರ ಮೊದಲ ಆದ್ಯತೆಯಾಗಿರುತ್ತದೆ. ನಮ್ಮ ಜೀವನದ ಈ ಬದಲಾವಣೆಯ ಹಂತದಲ್ಲಿ, ನಿಮ್ಮ ಸಹಾನುಭೂತಿ, ದಯೆ ಹಾಗೂ ನಮ್ಮ ಖಾಸಗಿತನಕ್ಕೆ ಗೌರವ ನೀಡಬೇಕೆಂದು ಕೋರುತ್ತೇವೆ" ಎಂದು ಪವನ್ ಹಾಗೂ ಅನ್ನಾ ತಿಳಿಸಿದ್ದಾರೆ.
ಅನ್ನಾ ಕೈ ಹಿಡಿಯುವ ಮುನ್ನ ಪವನ್ ಕಲ್ಯಾಣ್ ಎರಡು ಮದುವೆಯಾಗಿ ಡಿವೋರ್ಸ್ ಪಡೆದಿದ್ದರು. ಇದೀಗ 3ನೇ ಪತ್ನಿಯಿಂದಲೂ ದೂರಾಗುತ್ತಿದ್ದಾರೆ. ನಿನ್ನೆ ಮೊನ್ನೆವರೆಗೂ ಪವನ್- ಅನ್ನಾ ದಂಪತಿ ಬಹಳ ಅನ್ಯೋನ್ಯವಾಗಿ ಇದ್ದರು. ದಿಢೀರನೆ ಈ ನಿರ್ಧಾರಕ್ಕೆ ಕಾರಣ ಏನು ಎಂದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಬಹಳ ಹಿಂದಿಯೇ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ವದಂತಿ ಹರಿದಾಡಿತ್ತು. ಅದೆಲ್ಲಾ ಸುಳ್ಳು ಎಂದೇ ಎಲ್ಲರೂ ಭಾವಿಸಿದ್ದರು. ಈಗ ಅದೇ ನಿಜವಾಗಿದೆ.
1997ರಲ್ಲಿ ನಂದಿನಿ ಎಂಬುವವರನ್ನು ಪವನ್ ಕಲ್ಯಾಣ್ ಮದುವೆ ಆಗಿದ್ದರು. ಎರಡೇ ವರ್ಷದಲ್ಲಿ ಇಬ್ಬರೂ ದೂರಾಗಿದ್ದರು. ಬಳಿಕ ನಟಿ ರೇಣು ದೇಸಾಯಿ ಪ್ರೀತಿಲಿ ಬಿದ್ದರು ಪವನ್ ಕಲ್ಯಾಣ್. ಆಕೆಯನ್ನು ಮದುವೆಯಾಗಲು 2008ರಲ್ಲಿ ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದರು. 2009ರಲ್ಲಿ ರೇಣು ದೇಸಾಯಿ ಕೈಹಿಡಿದ ಪವನ್ ಮೂರ ವರ್ಷಗಳಲ್ಲೇ(2012) ಡಿವೋರ್ಸ್ ಪಡೆದಿದ್ದರು. ಮರುವರ್ಷ ರಷ್ಯನ್ ಮೂಲದ ಮಾಡೆಲ್, ನಟಿ ಅನ್ನಾ ಲೆಜ್ನೆವಾ ಜೊತೆ ಡಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. 13 ವರ್ಷಗಳ ಬಳಿಕ ಇವರಿಬ್ಬರು ದೂರಾಗುತ್ತಿದ್ದಾರೆ.