ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಡಿವೋರ್ಸ್ ಪರ್ವ ಮುಂದುವರೆದಿದೆ. ಒಬ್ಬರಲ್ಲ ಇಬ್ಬರಲ್ಲ. ಮೂವರನ್ನು ಮದುವೆಯಾಗಿ ಎಲ್ಲರಿಗೂ ಡಿವೋರ್ಸ್ ಕೊಟ್ಟು ಮತ್ತೆ ಏಕಾಂಗಿ ಆಗಿದ್ದಾರೆ. ಮೊದಲ ಪತ್ನಿ ನಂದಿನಿಗೆ ಡಿವೋರ್ಸ್ ಕೊಡುವ ಮುನ್ನ ರೇಣು ದೇಸಾಯಿ ಜೊತೆ ಲಿವ್ ರಿಲೇಷನ್‌ಶಿಪ್‌ನಲ್ಲಿದ್ದರು. ಅನ್ನಾ ಲೆಜ್ನೆವಾ ವಿಚಾರದಲ್ಲೂ ಹೀಗೆ ನಡೆದಿತ್ತು.

'ತೀನ್‌ಮಾರ್' ಚಿತ್ರದ ಹಾಡೊಂದರಲ್ಲಿ ಅನ್ನಾ ಲೆಜ್ನೆವಾ ಕಾಣಿಸಿಕೊಂಡಿದ್ದರು. ಅದೇ ಸಿನಿಮಾ ಸೆಟ್‌ನಲ್ಲಿ ಶುರುವಾದ ಪರಿಚಯ ಬಳಿಕ ಸ್ನೇಹವಾಗಿ ಕೊನೆಗೆ ಪ್ರೀತಿ ಆಗಿ ಬದಲಾಗಿತ್ತು. ರಷ್ಯಾ ಮೂಲಕ ಅನ್ನಾ ಅದಾಗಲೇ ಒಂದು ಮದುವೆಯಾಗಿ ಡಿವೋರ್ಸ್ ಪಡೆದಿದ್ದರು. ಮೊದಲ ಪತಿಯಿಂದ ಒಬ್ಬ ಮಗಳು ಇದ್ದಳು. ಅನ್ನಾಗೆ ಸ್ವತಃ ಪವನ್ ಕಲ್ಯಾಣ್ ಪ್ರಪೋಸ್ ಮಾಡಿದ್ದರು. ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಚಾಟ್ ಮಾಡುವಾಗ ಸ್ವತಃ ಅನ್ನಾ ಹೇಳಿದ್ದರು.

ಪವನ್‌ ಕಲ್ಯಾಣ್‌ಗಾಗಿ ಅನ್ನಾ ಸಂಪೂರ್ಣವಾಗಿ ಬದಲಾಗಿದ್ದರು. ದೇಶ ಬಿಟ್ಟು ದೇಶಕ್ಕೆ ಬಂದು ನೆಲೆಸಿದ್ದರು. ದಂಪತಿಗೆ ಒಬ್ಬರ ಮಗ ಕೂಡ ಹುಟ್ಟಿದ್ದ. ಕ್ರಿಶ್ಚಿಯನ್ ಆಗಿದ್ದ ಅನ್ನಾ ನಿಧಾನವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಹಿಂದೂ ಆಚಾರ ವಿಚಾರಗಳನ್ನು ರೂಢಿಸಿಕೊಂಡರು. ಅದ್ಯಾವಮಟ್ಟಿಗೆ ಅಂದ್ರೆ ತಿರುಪತಿಯಲ್ಲಿ ಮುಡಿ ಕೊಟ್ಟು ತಿಮ್ಮಪ್ಪನ ಸೇವೆ ಮಾಡುವಮಟ್ಟಿಗೆ ಆಕೆ ಸನಾತನ ಧರ್ಮವನ್ನು ಒಪ್ಪಿಕೊಂಡರು. ಎಲ್ಲವೂ ಪತಿಗಾಗಿ ಎನ್ನಲಾಗಿತ್ತು. ಮೆಗಾ ಫ್ಯಾಮಿಲಿಗೆ ಕೂಡ ಅನ್ನಾ ಹತ್ತಿರವಾಗಿದ್ದರು.

ಅಂತಿಮವಾಗಿ ಮೂರನೇ ಪತ್ನಿಯಿಂದ ದೂರಾಗಲು ಪವನ್ ಕಲ್ಯಾಣ್ ಮುಂದಾಗಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಮಾಧ್ಯಮ ಪ್ರಕಟನೆ ನೀಡಿದ್ದಾರೆ. ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಅಭಿಮಾನಿಗಳು ನಟನ ಬೆಂಬಲಕ್ಕೆ ನಿಂತಿದ್ದಾರೆ. ಉಳಿದವರಿಗೆ ಟೀಕಿಸಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಪವನ್ ಮಾಜಿ ಪತ್ನಿ ರೇಣು ದೇಸಾಯಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನೊಂದಿರುವ ವ್ಯಕ್ತಿಯನ್ನು ಮತ್ತಷ್ಟು ನೋಯಿಸಬೇಡಿ ಎಂದು ಮನವಿ ಮಾಡಿದ್ದಾರೆ.