ಚಿತ್ರ: ಬತ್ತಾ
ನಿರ್ದೇಶಕ: ಬಾಲಾಜಿ ತರಣೀತರನ್
ಕಲಾವಿದರು: ವಿಜಯ್ ಸೇತುಪತಿ, ಬಾಲನಟ ಸಾಯಿ ಪೃಥ್ವಿರಾಜ್ ಮುಂತಾದವರು.
ಸಂಗೀತ; ಸಾಯಿ ಅಭಯಂಕರ್
ನಿರ್ಮಾಣ: ಸಿನಿ1 ಸ್ಟುಡಿಯೋಸ್
ಎ ಫಾರ್ ಆಪಲ್ ಸ್ಟುಡಿಯೋಸ್
ಪ್ರೇಕ್ಷಕರನ್ನು ರಂಜಿಸೋಕೆ ನೂರಾರು ಕೋಟಿ ಬಂಡವಾಳ, ಘಟಾನುಘಟಿ ಕಲಾವಿದರು, ಖ್ಯಾತ ತಂತ್ರಜ್ಞರು ಬೇಕಿಲ್ಲ. ಬೇಕಿರುವುದು ಒಳ್ಳೆ ಕಥೆ, ಚಿತ್ರಕಥೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು. ಎಷ್ಟು ದೊಡ್ಡ ಸಿನಿಮಾ ಮಾಡಿದ್ರು ಭಾವನಾತ್ಮಕವಾಗಿ ಕನೆಕ್ಟ್ ಆಗದೇ ಇದ್ರೆ ಎಲ್ಲವೂ ವ್ಯರ್ಥ. ಸದ್ಯ ಓಟಿಟಿಯಲ್ಲಿ 'ಭತ್ತಾ' ಎಂಬ ತಮಿಳು ಸಿನಿಮಾ ಸಖತ್ ಸದ್ದು ಮಾಡ್ತಿದೆ.
ವಿಜಯ್ ಸೇತುಪತಿ ನಟನೆಯ 'ಭತ್ತಾ' ಸಿನಿಮಾ ತಿಂಗಳ ಹಿಂದೆ ತೆರೆಕಂಡಿತ್ತು. ಇದೀಗ ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಕನ್ನಡ ಸೇರಿ 5 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಒಂದು ಸಣ್ಣ ಎಳೆ ಇಟ್ಟುಕೊಂಡು ಬಾಲಾಜಿ ತರಣೀತರನ್ ಮತ್ತವರ ತಂಡ ಒಂದೊಳ್ಳೆ ಫೀಲ್ ಗುಡ್ ಸಿನಿಮಾ ಮಾಡಿ ಗೆದ್ದಿದೆ. ಓಟಿಟಿಯಲ್ಲಿ ಸಿನಿಮಾ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಕಥೆ ಏನು ? ಸಿನಿಮಾ ಹೇಗಿದೆ ? ರಿವ್ಯೂ ರಿಪೋರ್ಟ್ ಇಲ್ಲಿದೆ.
ಕಥೆ
ಇದು 80 ದಶಕದ ಮಧ್ಯಭಾಗದಲ್ಲಿ ಮದ್ರಾಸ್ನಲ್ಲಿ ನಡೆಯುವ ಕಥೆ. ಬತ್ತಾ(ವಿಜಯ್ ಸೇತುಪತಿ) ಸಣ್ಣ ಗ್ಯಾಂಗ್ಸ್ಟರ್. ಎದುರಾಳಿಗಳ ಪಾಲಿಗೆ ಯಮ. ಕೋಪ ಬಂದರೆ ಹಿಂದು ಮುಂದು ನೋಡದೇ ಎಲ್ಲರನ್ನು ಹೊಡೆದು ಬಿಸಾಕ್ತಾನೆ. ತನ್ನ ಮಡದಿ, ಮಗಳು ಬಿಟ್ಟು ಬೇರೆಯವರ ಬಗ್ಗೆ ದಯೆ ದಾಕ್ಷಿಣ್ಯ ಅವನಿಗಿರಲ್ಲ. ಮತ್ತೊಂದು ಕಡೆ ಸರ್ಕಾರಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಶಬರಿ(ಸಾಯಿ ಪೃಥ್ವಿರಾಜ್). ರೌಡಿ ಭತ್ತಾನನ್ನು ನೋಡಿದ್ರೆ ಬಾಲಕ ಶಬರಿ ಸಿಕ್ಕಾಪಟ್ಟೆ ಭಯ.
ಬೇಸಿಗೆ ರಜೆಯಲ್ಲಿ ಒಮ್ಮೆ ಶಾಲೆ ಮುಚ್ಚಿರುತ್ತೆ. ಭತ್ತಾ ಹಾಗೂ ಶಬರಿ ಇಬ್ಬರೂ ಆ ಸಮಯದಲ್ಲಿ ಶಾಲೆ ಒಳಗೆ ಹೋಗ್ತಾರೆ. ಭತ್ತಾನನ್ನು ಶಾಲೆಯ ಶೌಚಾಲಯದಲ್ಲಿ ಶಬರಿ ಕೂಡಿ ಹಾಕಿಬಿಡ್ತಾನೆ. ಅಲ್ಲಿಂದ ತಪ್ಪಿಸಿಕೊಂಡು ಬರಲು ಭತ್ತಾ ಮಾಡುವ ಪ್ರಯತ್ನ ಅಷ್ಟಿಷ್ಟಲ್ಲ. ಅವರಿಬ್ಬರು ಶಾಲೆ ಒಳಗೆ ಹೋಗಲು ಕಾರಣ ಏನು ? ಮುಂದೆ ಏನೆಲ್ಲಾ ಆಗುತ್ತೆ ? ಅನ್ನೋದು ಸಿನಿಮಾ ಕಥೆ.
ಸಿನಿಮಾ ಹೇಗಿದೆ ?
ಕರುಣೆ, ಅನುಕಂಪ ಇಲ್ಲದೇ ಎಲ್ಲರ ಮೇಲೆ ಕೂಗಾಡುವ, ಕುಡಿದು ಗಲಾಟೆ ಮಾಡುವ ಕೋಪಿಷ್ಟ ರೌಡಿ ಭತ್ತಾನನ್ನು ಪುಟ್ಟ ಬಾಲಕ ಶಾಲೆಯ ಶೌಚಾಲಯದಲ್ಲಿ ಕೂಡಿ ಹಾಕುತ್ತಾನೆ. ಇಷ್ಟೇ ಚಿತ್ರದ ಎಳೆ. ಇದರ ಸುತ್ತಾ ಸನ್ನಿವೇಶಗಳನ್ನು ನಿರ್ದೇಶಕರು ಕಟ್ಟಿಕೊಳ್ಳುತ್ತಾ ಹೋಗಿದ್ದಾರೆ. ಎಲ್ಲೂ ಲಾಜಿಕ್ ಮಿಸ್ ಆಗದೇ ಬಹಳ ಸುಂದರವಾಗಿ ಕಥೆ ಹೇಳುತ್ತಾ ಹೋಗುತ್ತಾರೆ. ಮಾನವ ಸಂಬಂಧಗಳ ಆಳವಾದ ಮೌಲ್ಯಗಳನ್ನು ಕಾವ್ಯದ ರೀತಿ ಚಿತ್ರಿಸುತ್ತಾ ಹೋಗಿದ್ದಾರೆ. ಫಸ್ಟ್ ಹಾಫ್ ಭತ್ತಾ ಆರ್ಭಟ, ಆತ ಸಂಕಷ್ಟಕ್ಕೆ ಸಿಲುಕುವುದನ್ನು ಹೇಳಿದ್ದಾರೆ. ಅರೇ ಅಷ್ಟೇನಾ ಕಥೆ ? ಭತ್ತಾ ಜೀವಂತವಾಗಿ ಶೌಚಾಲಯದಿಂದ ಹೊರಗೆ ಬರ್ತಾನಾ ? ಇಲ್ವಾ ಎನ್ನುವ ಗೊಂದಲದೊಂದಿಗೆ ಇಂಟರ್ವಲ್..
ಭತ್ತಾ ತನ್ನನ್ನು ಯಾರು ಹೀಗೆ ಶೌಚಾಲಯದಲ್ಲಿ ಕೂಡಿ ಹಾಕಿದ್ರು ಎನ್ನುವ ಹುಡುಕಾಟದೊಂದಿಗೆ ಸೆಕೆಂಡ್ ಹಾಫ್ ಆರಂಭವಾಗುತ್ತದೆ. ಎಲ್ಲಾ ಮುಗಿತಲ್ಲ, ಇನ್ನೇನಿದೆ ಎಂದು ಅಂದುಕೊಳ್ಳುವ ವೇಳೆಗೆ ಕಥೆ ಬೇರೆಯದ್ದೇ ಮಗ್ಗುಲಿಗೆ ಹೊರಳುತ್ತದೆ. ಇನ್ನು ಭತ್ತಾ ಯಾಕೆ ಶಾಲೆಯ ಒಳಗೆ ಹೋಗಿದ್ದ ಎನ್ನುವುದಕ್ಕೆ ಕಾಮಿಡಿ ಟಚ್ ಕೊಟ್ಟು ಮಜಾ ಕೊಟ್ಟಿದ್ದಾರೆ. ಬುದ್ಧನ ಪ್ರಭಾವದಿಂದ ಅಂಗುಲೀಮಾಲ ಹೃದಯಪರಿವರ್ತನೆಯಾದಂತೆ ಶಬರಿಯಿಂದ ಭತ್ತಾ ಜೀವನವೇ ಬದಲಾಗಿ ಹೋಗುತ್ತದೆ.
ಕಲಾವಿದರ ನಟನೆ
ಮೇಲ್ನೋಟಕ್ಕೆ ಸಿನಿಮಾ ನಾಯಕ ವಿಜಯ್ ಸೇತುಪತಿ ಅನ್ನಿಸಿದರೂ ಶಬರಿಯಾಗಿ ನಟಿಸಿರುವ ಬಾಲಕ ಸಾಯಿ ಪೃಥ್ವಿರಾಜ್ ಹೆಚ್ಚು ಅಂಕ ಗಿಟ್ಟಿಸಿಬಿಟ್ಟಿದ್ದಾನೆ. ಮುಗ್ಧ ಬಾಲಕನಾಗಿ ಪ್ರತಿನೋಟ, ಪ್ರತಿ ಮಾತಿನಲ್ಲಿ ಪಾತ್ರವನ್ನು ಆವಾಹಿಸಿಕೊಂಡಿದ್ದಾನೆ. ಇನ್ನು ರೆಟ್ರೋ ಸ್ಟೈಲ್ ಗ್ಯಾಂಗ್ಸ್ಟರ್ ಆಗಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಅವರಿಗೆ ಹೇಳಿಮಾಡಿಸಿದಂತಹ ಪಾತ್ರ ಇದು. ಇನ್ನುಳಿದಂತೆ ಲಿಜೋಮೋಲ್ ಜೋಸ್, ಹರಿ ಕೃಷ್ಣನ್, ಅರ್ಜುನ್ ಚಿದಂಬರಂ, ಅಜಯ್ ಘೋಷ್ ಚಿತ್ರದ ತಾರಾಗಣದಲ್ಲಿದ್ದು ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ
ಒಂದು ಸಣ್ಣ ಎಳೆಯನ್ನಿಟ್ಟುಕೊಂಡು 2 ಗಂಟೆ 39 ನಿಮಿಷದ ಚಿತ್ರ ಮಾಡುವುದು ತಮಾಷೆಯ ಮಾತಲ್ಲ. ಅಷ್ಟು ನೋಡುವರನ್ನು ಹಿಡಿದಿಟ್ಟುಕೊಳ್ಳುವುದು ಸಾಹಸವೇ ಸರಿ. ಆ ಪ್ರಯತ್ನದಲ್ಲಿ ನಿರ್ದೇಶಕ ಬಾಲಾಜಿ ತರಣೀತರನ್ ಕೆಲಸ ಮೆಚ್ಚಲೇಬೇಕು. ಅವರ ಬರವಣಿಗೆ ಮೇಲೆಯೇ ಇಡೀ ಸಿನಿಮಾ ನಿಂತಿದೆ. ಇನ್ನು 80ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿರುವುದು ಗೊತ್ತಾಗುತ್ತದೆ. ಲೋಕೇಶನ್ಗಳು, ಸೆಟ್, ಆರ್ಟ್ ವರ್ಕ್ ಎಲ್ಲವೂ 40 ಹಿಂದಕ್ಕೆ ನೋಡುಗರನ್ನು ಕರೆದೊಯ್ಯುತ್ತದೆ. ಸಾಯಿ ಅಭಯಂಕರ್ ಸಂಗೀತ ಚಿತ್ರದ ಜೀವಾಳ.
ಕೊನೆಯದಾಗಿ
'ಮೇಯಳಗನ್' ರೀತಿಯ ಒಂದು ಫೀಲ್ ಗುಡ್ ಸಿನಿಮಾ 'ಬತ್ತಾ'. ಪ್ರೇಕ್ಷಕರಿಗೆ ಕನೆಕ್ಟ್ ಆಗದ ಚಿತ್ರ ವಿಚಿತ್ರ ಪ್ರಪಂಚಗಳನ್ನು ಸೃಷ್ಟಿಸಿ ಕ್ರೌರ್ಯ, ರಕ್ತಪಾತ, ಗನ್ ಬಂದೂಕುಗಳ ಆರ್ಭಟ ತೋರಿಸುವ ಮಾಸ್ ಆಕ್ಷನ್ ಸಿನಿಮಾಗಳ ನಡುವೆ 'ಬತ್ತಾ' ನಿಜಕ್ಕೂ ಅದ್ಭುತ ಸಿನಿಮಾ. ಚಿತ್ರದ ಕಾಲಾವಧಿ ಕೊಂಚ ಅಧಿಕ ಆಯ್ತು ಅನ್ನಿಸದೇ ಇರದು. ಇನ್ನುಳಿದಂತೆ ಒಮ್ಮೆ ನೋಡಿ ನಿಜಕ್ಕೂ ಎಂಜಾಯ್ ಮಾಡುವಂತಹ ಸಿನಿಮಾ ಇದು. ಓಟಿಟಿಯಲ್ಲಿ ಮಿಸ್ ಮಾಡದೇ ನೋಡಿ.
ರೇಟಿಂಗ್: 3/5