ಸೀಕ್ವೆಲ್ ಸಿನಿಮಾ ಮಾಡುವುದು ಎಷ್ಟು ಲಾಭವೋ ಅಷ್ಟೇ ರಿಸ್ಕ್ ಕೂಡ ಇರತ್ತೆ. ಒಂದು ಸಿನಿಮಾ ಹಿಟ್ ಆಗಿದೆ. ಆ ಕಥೆಯನ್ನು ಎಳೆದಾಡಿ ಗೆದ್ದುಬಿಡಬಹುದು ಎಂದುಕೊಳ್ಳುವುದು ತಪ್ಪು. ಮೊದಲ ಸಿನಿಮಾ ಮಾಡಿದ ಮ್ಯಾಜಿಕ್ ಎರಡನೇ ಸಿನಿಮಾದಲ್ಲೂ ರಿಪೀಟ್ ಆಗಬೇಕು. ಆಗ ಮಾತ್ರ ಸಿನಿಮಾ ಗೆಲ್ಲೋಕೆ ಸಾಧ್ಯ. ಆದರೆ ಹಿಂದಿನ ಸಿನಿಮಾ ಗೆಲುವು ಸಹಜವಾಗಿಯೇ ಹೊಸ ಚಿತ್ರ ನೋಡುವಂತೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತದೆ.
'ಜೈಲರ್'-2 ಸಿನಿಮಾ ಮಾಡ್ತಾರೆ ಎಂದಾಗ ಸಹಜವಾಗಿಯೇ ಕುತೂಹಲ ಮೂಡಿತ್ತು. ಮತ್ತೊಮ್ಮೆ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಹೇಗೆ ಅಬ್ಬರಿಸ್ತಾರೆ ಎನ್ನುವುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದರು. ಆ ಸಮಯ ಬಂದಿದೆ. ಸಿನಿಮಾ ತೆರೆಕಂಡಿದೆ. ಅಷ್ಟಕ್ಕೂ ಸಿನಿಮಾ ಕಥೆ ಏನು? ನೆಲ್ಸನ್ ಮತ್ತೊಮ್ಮೆ ಗೆದ್ರಾ? ಪ್ಲಸ್ ಏನು ? ಮೈನಸ್ ಏನು ? ಬನ್ನಿ ನೋಡೋಣ.
ಕಥೆ
ಹಿಂದಿನ ಸಿನಿಮಾ ಕಥೆ ಎಲ್ಲಿಗೆ ಮುಕ್ತಾಯವಾಗಿತ್ತೋ ಅಲ್ಲಿಂದಲೇ ಕಥೆ ಶುರುವಾಗುತ್ತದೆ. ದುಷ್ಟ ಮಗ ಅರ್ಜುನ್ನನ್ನು(ವಸಂತ್ ರವಿ) ಕೊಂದ ಬಳಿಕ ಮುತ್ತುವೇಲ್ ಪಾಂಡಿಯನ್ ತನ್ನ ಫ್ಯಾಮಿಲಿ ಸಮೇತ ಕೊಯಂಬತ್ತೂರಿ ಸ್ಥಳಾಂತರಗೊಳ್ಳುತ್ತಾನೆ. ಅರ್ಜುನ್ ಸತ್ತಿರುವ ವಿಚಾರವನ್ನು ಫ್ಯಾಮಿಲಿಗೆ ಗೊತ್ತಾಗದಂತೆ ಮಚ್ಚಿಟ್ಟು ಸೂಪರ್ ಮಾರ್ಕೆಟ್ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಮತ್ತೊಂದು ಕಡೆ ಮಗ ದುಷ್ಟನಾಗಲು ಕಾರಣವಾದ ದುಷ್ಟಕೂಟದ ಮೂಲ ಹುಡುಕುತ್ತಿರುತ್ತಾನೆ. ವರ್ಮಾನನ್ನು ಕೊಂದಿದ್ದು ಯಾರು ಎಂದು ಇತ್ತ ದಿಲೀಪ್ (ಸೂರಜ್ ವೆಂಜರಮೂಡು) ತಲಾಶ್ ಮಾಡುತ್ತಿರುತ್ತಾನೆ. ಜೊತೆಗೆ ಮೂರು ಕಂಟೇನರ್ಗನ್ನು ಹುಡುಕುವ ಜವಾಬ್ದಾರಿ ಕೂಡ ಆತನ ಹೆಗಲೇರಿದೆ.
ಅಷ್ಟಕ್ಕೂ ವರ್ಮಾ ಹಾಗೂ ದಿಲೀಪ್ ಹಿಂದೆ ಇರುವ ಮಾಸ್ಟರ್ ಮೈಂಡ್ ಭೋಧಿ ಕಲ್ಪಕ್(ಎಸ್ಜೆ ಸೂರ್ಯ) ಯಾರು ? ಆತನ ಹಿನ್ನೆಲೆ ಏನು ? ಮುತ್ತುವೇಲ್ ಹೆಣೆಯುವ ಬಲೆಗೆ ದಿಲೀಪ್ ಬೀಳೋದು ಹೇಗೆ ? ಮುತ್ತುವೇಲ್ ಮಗನನ್ನು ಕೊಂದ ವಿಚಾರ ಫ್ಯಾಮಿಲಿಗೆ ಗೊತ್ತಾಗುತ್ತಾ ? ಮತ್ತೆ ನರಸಿಂಹ(ಶಿವರಾಜ್ಕುಮಾರ್) ಹಾಗೂ ಮ್ಯಾಥ್ಯೂ(ಮೋಹನ್ ಲಾಲ್) ಅಖಾಡಕ್ಕೆ ಇಳಿಯುವಂತಾಗುವುದು ಹೇಗೆ ? ಈ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ಸಿನಿಮಾ ನೋಡಬೇಕು.
ಸಿನಿಮಾ ಹೇಗಿದೆ ?
ಡಾರ್ಕ್ ಕಾಮಿಡಿ ಹಾಗೂ ಎಲಿವೇಷನ್ ಸೀನ್ಸ್ ನೆಲ್ಸನ್ ಟ್ರೇಡ್ಮಾರ್ಕ್.. 'ಜೈಲರ್' ಸೀಕ್ವೆಲ್ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಭಾರೀ ಕಥೆ ಏನು ಇಲ್ಲದೇ ಇದ್ದರೂ ಸಿಂಪಲ್ ಕಥೆಗೆ ನಿರ್ದೇಶಕರ ಟ್ರೀಟ್ಮೆಂಟ್ ಚೆನ್ನಾಗಿದೆ. ಫಸ್ಟ್ ಹಾಫ್ ಕಾಮಿಡಿ ಸಖತ್ ಮಜಾ ಕೊಡುತ್ತದೆ. ಜೊತೆಗೆ ಅಲ್ಲಲ್ಲಿ ಬರುವ ಒಂದಷ್ಟು ಎಲಿವೇಷನ್ ಸೀನ್ಸ್ ಅಭಿಮಾನಿಗಳಿಗೆ ಹಬ್ಬವೇ ಸರಿ. ಇನ್ನು ಇಂಟರ್ವಲ್ ಬ್ಲಾಕ್ ಅಂತೂ ಬಾಡೂಟವೇ ಸರಿ.
'ಜೈಲರ್' ಚಿತ್ರಕ್ಕೆ ಬಹಳ ಹೋಲಿಕೆ ಇರುವಂತೆ ಸೀಕ್ವೆಲ್ ಕೂಡ ಕಾಣುತ್ತೆ. ಹೊಸತನ ಏನು ಇಲ್ಲದೇ ಇದ್ದರೂ ಎಂಗೇಜಿಂಗ್ ಅನಿಸಿಕೊಳ್ಳುತ್ತೆ. ತೆರೆಮೇಲೆ ತಲೈವಾ ಎಂಟ್ರಿ ಕೂಡ ಸಖತ್ ಸಿಂಪಲ್ ಆಗಿದೆ. ಯೋಗಿಬಾಬು ಹಾಗೂ ರಜನಿಕಾಂತ್ ಕಾಮಿಡಿ ಟ್ರ್ಯಾಕ್ ಚೆನ್ನಾಗಿ ವರ್ಕ್ಔಟ್ ಆಗಿದೆ. ಒಂದ್ಕಡೆ ಭೋದಿ ಕಲ್ಪಕ್ ಅಂಡ್ ಗ್ಯಾಂಗ್ ಮುತ್ತುವೇಲ್ಗಾಗಿ ಹುಡುಕಾಡುತ್ತಿದ್ದರೆ ಅವರ ಪಕ್ಕದಲ್ಲೇ ಇದ್ದು ಮುತ್ತುವೇಲ್ ಆಡುವ ಆಟ ಮಜಾ ಕೊಡುತ್ತೆ.
ಸೆಕೆಂಡ್ ಹಾಫ್ನಲ್ಲಿ ಎಸ್.ಜೆ ಸೂರ್ಯ ಪಾತ್ರ ಪರಿಚಯವಾಗುತ್ತದೆ. ಆತನ ಸಹೋದರಿ ಕಾಂತಾ ಕಲ್ಪಕ್(ವಿದ್ಯಾಬಾಲನ್) ಗಮನ ಸೆಳೆಯುತ್ತಾರೆ. ಇನ್ನು ರಜನಿಕಾಂತ್ ಹಾಗೂ ಎಸ್.ಜೆ ಸೂರ್ಯ ಮುಖಾಮುಖಿ ದೃಶ್ಯಗಳು ಹೈಲೆಟ್ ಎನಿಸಿಕೊಳ್ಳುತ್ತದೆ. ಬಳಿಕ ಕೊಂಚ ಎಮೋಷನಲ್ ಕಡೆ ಕಥೆ ಸಾಗುತ್ತದೆ. ಒಂದಷ್ಟು ಟ್ವಿಸ್ಟ್ಗಳ ಜೊತೆಗೆ ಕ್ಲೈಮ್ಯಾಕ್ಸ್ನಲ್ಲಿ ಪಾರ್ಟ್- 3 ಸುಳಿವು ಕೊಟ್ಟು ನೆಲ್ಸನ್ ಸಿನಿಮಾ ಮುಗಿಸಿದ್ದಾರೆ. ಅಭಿಮಾನಿಗಳಿಗಂತೂ ಪೈಸಾ ವಸೂಲ್ ಮನರಂಜನೆ ಸಿಗುತ್ತದೆ. ಆದರೆ ಫಸ್ಟ್ ಹಾಫ್ ರೀತಿ ಸೆಕೆಂಡ್ ಹಾಫ್ ತೃಪ್ತಿ ನೀಡುವುದಿಲ್ಲ. ಹಾಡುಗಳು ನಿರಾಸೆ ಮೂಡಿಸುತ್ತವೆ. ಹಿಂದಿನ ಚಿತ್ರಕ್ಕೆ ಪ್ಲಸ್ ಆಗಿದ್ದ ಅದೇ ಅಂಶ ಇಲ್ಲಿ ಮೈನಸ್ ಆಗಿಬಿಟ್ಟಿದೆ.
ಕಲಾವಿದರ ನಟನೆ
ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಆಗಿ ರಜಿನಿಕಾಂತ್ ಅಬ್ಬರಿಸಿದ್ದಾರೆ. ತಣ್ಣಗೆ ಕಾಣುವ ವ್ಯಕ್ತಿ ಆಗಾಗ್ಗೆ ಟೈಗರ್ ಆಗಿ ಗರ್ಜಿಸಿದ್ದಾರೆ. ರಮ್ಯಾಕೃಷ್ಣ, ವಿದ್ಯಾಬಾಲನ್, ಸೂರಜ್ ವೆಂಜ್ರಮೂಡು ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದ್ರೆ ಎಸ್.ಜೆ ಸೂರ್ಯ ಪಾತ್ರ ಅಷ್ಟೇನು ಕಿಕ್ ಕೊಡಲ್ಲ. ಮಿಥುನ್ ಚಕ್ರವರ್ತಿಗೆ ದೊಡ್ಡ ಪಾತ್ರವೇ ಸಿಕ್ಕಿದೆ. ಶಿವಣ್ಣ, ಮೋಹನ್ ಲಾಲ್ ಹೀಗೆ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವವರು ಕೆಲವೇ ಕ್ಷಣಗಳು ತೆರೆಮೇಲೆ ಬಂದ್ರು ಮಜಾ ಕೊಡ್ತಾರೆ.
ತಾಂತ್ರಿಕವಾಗಿ ಸಿನಿಮಾ
ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಪ್ರೇಕ್ಷಕರನ್ನು ರಂಜಿಸಲು ಬೇಕಾದ ಅಂಶಗಳನ್ನು ಸೇರಿಸಿ ನೆಲ್ಸನ್ ಸಿನಿಮಾ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ರಜನಿಕಾಂತ್ ಹೀಗೂ ಕಾಣಿಸಿಕೊಳ್ತಾರಾ ಎನ್ನುವಂತೆ ಕೆಲ ಸನ್ನಿವೇಶಗಳಲ್ಲಿ ತೋರಿಸಿದ್ದಾರೆ. ಅದಕ್ಕಾಗಿ ತಲೈವಾರನ್ನು ಒಪ್ಪಿಸಿ ಗೆದ್ದಿದ್ದಾರೆ. ಅನಿರುದ್ಧ್ ಸಂಗೀತದಲ್ಲಿ ಹಾಡುಗಳು ಸದ್ದು ಮಾಡದೇ ಇದ್ರು ಹಿನ್ನೆಲೆ ಸಂಗೀತದಿಂದ ಚಿತ್ರವನ್ನು ಮೇಲೆತ್ತಿದ್ದಾರೆ. ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ, ಆರ್. ನಿರ್ಮಲ್ ಸಂಕಲನ ಎಲ್ಲವೂ ಚಿತ್ರವನ್ನು ಚೆಂದಗಾಣಿಸಿದೆ.
ಕೊನೆಯದಾಗಿ
ಒಟ್ಟಾರೆ 'ಜೈಲರ್'-2 ಫಸ್ಟ್ ಹಾಫ್ ಸೂಪರ್, ಸೆಕೆಂಡ್ ಹಾಫ್ ಸುಮಾರು ಎನ್ನುವಂತಿದೆ. ಆದರೆ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗುತ್ತೆ. ಫ್ಯಾಮಿಲಿ ಸಮೇತ ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಆದರೂ ಕರ್ನಾಟಕದಲ್ಲಿ ಟಿಕೆಟ್ ದರ ಕಮ್ಮಿ ಆದ್ಮೇಲೆ ಸಿನಿಮಾ ನೋಡುವುದು ಉತ್ತಮ.
ರೇಟಿಂಗ್: 2.75/5