ರಾಜ್ಕುಮಾರ್ ಪೆರಿಯಸ್ವಾಮಿ ನಿರ್ದೇಶದಲ್ಲಿ ಧನುಷ್, ಸಾಯಿಪಲ್ಲವಿ ಹಾಗೂ ಮಮ್ಮುಟ್ಟಿ ನಟನೆಯ 'O.M' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಸೆನ್ಸಾರ್ ಸಮಸ್ಯೆಯಿಂದ ಚಿತ್ರದ ಟೈಟಲ್ ಕೊಂಚ ಬದಲಿಸಲಾಗಿದೆ.
ತಮಿಳುನಾಡು ಹಾಗೂ ಆಂಧ್ರ ಗಡಿಯಲ್ಲಿ ರಕ್ತಚಂದನ ಸ್ಮಗ್ಲಿಂಗ್ ಮಾಫಿಯಾ ಸುತ್ತಾ 'O.M' ಸಿನಿಮಾ ಕಥೆ ಕಟ್ಟಿಕೊಡಲಾಗಿದೆ. ಕಳ್ಳ- ಪೊಲೀಸ್ ಆಟವೇ ಚಿತ್ರದ ಕಥಾಹಂದರ ಎನ್ನುವುದ ಟ್ರೈಲರ್ ನೋಡಿದ್ರೆ ಅರ್ಥವಾಗುತ್ತದೆ. ದೊಡ್ಡ ಮಾಫಿಯಾ ಡಾನ್ ಬರ್ಮಾ ಕಾರ್ತಿಕೇಯನ್ ಸಿಯಾ(ಮಮ್ಮುಟ್ಟಿ) ದರ್ಶನ ಕೊಟ್ಟಿದ್ದಾರೆ. ಆತನ ಸಾಮ್ರಾಜ್ಯ ನಾಶ ಮಾಡುವುದಕ್ಕೆ ಟಾಸ್ಕ್ ಫೋರ್ಸ್ ಆಫೀಸರ್ ಪಳನಿವೇಲ್(ಧನುಷ್) ಅಖಾಡಕ್ಕೆ ಇಳಿಯುತ್ತಾನೆ. ಕಾರ್ತಿಕೇಯನ್ ಗ್ಯಾಂಗ್ನಲ್ಲಿ ಸ್ಮಗ್ಲರ್ ಆಗಿ ಸೇರಿ ಹೇಗೆ ಆತ ತನ್ನ ಗುರಿ ಸಾಧಿಸುತ್ತಾನೆ ಎನ್ನುವುದು ಸಿನಿಮಾ ಕಥೆ.
ಎಎಸ್ಪಿ ನಿತ್ಯಾ ರೆಡ್ಡಿ ಆಗಿ ಸಾಯಿ ಪಲ್ಲವಿ ಅಬ್ಬರಿಸಿದ್ದಾರೆ. ಕೇರಳ ಕೇಡರ್ನ ಐಪಿಎಸ್ ಅಧಿಕಾರಿ ಮೆರಿನ್ ಜೋಸೆಫ್ ಅವರ ನೈಜ ಜೀವನದಿಂದ ಪ್ರೇರಣೆಗೊಂಡು ನಿತ್ಯಾ ರೆಡ್ಡಿ ಪಾತ್ರವನ್ನು ಕಟ್ಟಿಕೊಟ್ಟಿರುವುದಾಗಿ ಚರ್ಚೆ ನಡೀತಿದೆ. ಇನ್ನು ಪಳನಿವೇಲ್ ಪತ್ನಿಯಾಗಿ ಕನ್ನಡ ನಟಿ ಶ್ರೀಲೀಲಾ ಮಿಂಚಿದ್ದಾರೆ. ರಕ್ತಚಂದನ ಕಳ್ಳಸಾಗಾಣಿಕೆ ತಡೆಯಲು ಐಪಿಎಸ್ ಅಧಿಕಾರಿ ನಿತ್ಯಾ ರೆಡ್ಡಿ ನೇಮಕಗೊಂಡಿರುತ್ತಾರೆ. ಇತ್ತ ಪೊಲೀಸರು 'O.M- ಆಪರೇಶನ್ ಮೋಲ್' ಹೆಸರಿನಲ್ಲಿ ಒಂದು ಕಾರ್ಯಾಚರಣೆ ಶುರು ಮಾಡುತ್ತಾರೆ. ಇದರಲ್ಲಿ ಪಳನಿವೇಲ್ ದಾಳವಾಗಿ ಹೇಗೆ ಆಟ ಆಡುತ್ತಾನೆ ಎನ್ನುವುದನ್ನು ತೆರೆಮೇಲೆ ನೋಡಬೇಕು.
ತೆಲುಗು ನಟಿ ರೇಣು ದೇಸಾಯಿ ಕೂಡ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ನಜೀರುದ್ದೀನ್ ಶಾ, ಇಂದ್ರನ್ಸ್ ಹಾಗೂ ಸಂಜಯ್ ಸ್ವರೂಪ್ 'O.M' ಚಿತ್ರದ ತಾರಾಗಣದಲ್ಲಿದ್ದಾರೆ. ಸರಣಿ ರೂಪದಲ್ಲಿ ಕಥೆಯನ್ನು ಹೇಳಲಾಗ್ತಿದೆ. ಇದು ಮೊದಲ ಚಾಪ್ಟರ್ ಎನ್ನುವುದು ಗೊತ್ತಾಗುತ್ತಿದೆ. ಮಮ್ಮುಟ್ಟಿ ಚಿತ್ರದಲ್ಲಿ ನಟಿಸಿರುವುದು ಕೇರಳಂನಲ್ಲಿ ಕೂಡ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ. ವಂಡರ್ ಬಾರ್ ಫಿಲ್ಮ್ಸ್ ಮತ್ತು ಆರ್ ಟೇಕ್ ಸ್ಟುಡಿಯೋಸ್ ಬ್ಯಾನರ್ಗಳ ಅಡಿಯಲ್ಲಿ ಚಿತ್ರವನ್ನು ಧನುಷ್, ಶ್ರದ್ಧಾ ಅಗರ್ವಾಲ್ ಮತ್ತು ಅಜ್ಮತ್ ಜಗ್ಮಾಗ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಸಾಯಿ ಅಭ್ಯಂಕರ್ ಸಂಗೀತ, ಕೆ. ಎಳಿಲ್ ಅರಸು ಛಾಯಾಗ್ರಾಹಕರಾಗಿ ಹಾಗೂ ಆರ್. ಕಲೈವಾಣನ್ ಸಂಕಲನ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ದಸರಾ ಸಂಭ್ರಮದಲ್ಲೇ 'O.M' ಸಿನಿಮಾ ಬಿಡುಗಡೆ ಪ್ರಯತ್ನ ನಡೆದಿತ್ತು. 'ಜೈಲರ್- 2' ಚಿತ್ರಕ್ಕಾಗಿ ಧನುಷ್ ಸಿನಿಮಾ ಬಿಡುಗಡೆ ಮುಂದೂಡಿದ್ದರು. ಮುಂದಿನ ವಾರ ಸಿನಿಮಾ ತೆರೆಗೆ ಬರಲಿದೆ. ಟ್ರೈಲರ್ ವಿಷ್ಯುವಲ್ಸ್, ಬಿಜಿಎಂ, ಆಕ್ಷನ್ ಎಲ್ಲವೂ ಕುತೂಹಲ ಮೂಡಿಸಿದ್ದು ಸಿನಿಮಾ ನೋಡಲು ಪ್ರೇಕ್ಷಕರು ಕಾಯುವಂತಾಗಿದೆ.