ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಕ್ರಿಕೆಟ್ ತಂಡದ ಒಡತಿ ಕಾವ್ಯಾ ಮಾರನ್ ಮದುವೆ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತ್ತು. ಗ್ರೀಸ್‌ ದೇಶದ ರೆಸಾರ್ಟ್‌ವೊಂದರಲ್ಲಿ ಕಲರ್‌ಫುಲ್ ಆಗಿ ಜೋಡಿಯ ಮದುವೆ ಶಾಸ್ತ್ರಗಳು ನಡೆದವು. ಇದೇ ಶನಿವಾರ(ನವೆಂಬರ್ 21) ಚೆನ್ನೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ನಡೆಯಲಿದೆ.

ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಡಿ. ಕೆ ಶಿವಕುಮಾರ್, ತಮಿಳುನಾಡು ಸಿಎಂ ವಿಜಯ್ ಸೇರಿದಂತೆ ಸಾಕಷ್ಟು ಗಣ್ಯರಿಗೆ ಈ ರಿಸೆಪ್ಷನ್ ಪಾರ್ಟಿಗೆ ಆಮಂತ್ರಣ ನೀಡಲಾಗಿದೆ. ಸ್ಟಾರ್ ಹೋಟೆಲ್‌ನಲ್ಲಿ ನಡೆಯುವ ಪಾರ್ಟಿಗೆ ಸಾಕಷ್ಟು ಸಿನಿಮಾ ತಾರೆಯರು ಸಾಕ್ಷಿ ಆಗಲಿದ್ದಾರೆ. ಆದರೆ ನಟ ಧನುಷ್ ಕೂಡ ಭಾಗವಹಿಸುತ್ತಾರಾ ಎನ್ನುವ ಚರ್ಚೆ ಶುರುವಾಗಿದೆ. ಗ್ರೀಸ್‌ನಲ್ಲಿ ನಡೆದ ಅನಿರುದ್ಧ್- ಕಾವ್ಯಾ ಡೆಸ್ಟಿನೇಷನ್‌ ವೆಡ್ಡಿಂಗ್‌ನಲ್ಲಿ ಧನುಷ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ನಿರ್ದೇಶಕರಾದ ನೆಲ್ಸನ್, ಲೋಕೇಶ್ ಕನಕರಾಜ್ ಸೇರಿದಂತೆ ಕೆಲವೇ ಆಪ್ತರಿಗೆ ಮಾತ್ರ ಮದುವೆಗೆ ಆಹ್ವಾನ ಸಿಕ್ಕಿತ್ತು.

ಅಂದಹಾಗೆ ಅನಿರುದ್ಧ್ ಪ್ರತಿಭೆಯನ್ನು ಮೊದಲು ಗುರ್ತಿಸಿದವರು ನಟ ಧನುಷ್.. ಇನ್ನು ರಜನಿಕಾಂತ್ ಕುಟುಂಬ ಹಾಗೂ ಅನಿರುದ್ಧ್ ಕುಟುಂಬಕ್ಕೆ ಇರುವ ನಂಟು ಗೊತ್ತೇಯಿದೆ. ತಲೈವಾ ಪತ್ನಿ ಲತಾ ರಜನಿಕಾಂತ್ ಸಹೋದರಿ ಮಗ ಅನಿರುದ್ಧ್.. ಹಾಗಾಗಿ ಚಿಕ್ಕಂದಿನಿಂದ ಆತನನ್ನು ಎತ್ತಿ ಆಡಿಸಿದ್ದಾರೆ ಸೂಪರ್ ಸ್ಟಾರ್.. ಒಂದ್ಕಡೆ ಧನುಷ್ ಹಾಗೂ ರಜನಿಕಾಂತ್ ಮಗಳು ಐಶ್ವರ್ಯ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಇದೇ ಕಾರಣಕ್ಕೆ ಅನಿರುದ್ಧ್ ಮದುವೆಗೆ ಧನುಷ್ ಬರಲಿಲ್ಲ ಎನ್ನಲಾಗ್ತಿದೆ.

ಐಶ್ವರ್ಯ ರಜನಿಕಾಂತ್ ಅವರನ್ನು ಮದುವೆಯಾದ ಬಳಿಕ ಅನಿರುದ್ಧ್ ಅವರನ್ನು ಧನುಷ್ ಚಿಕ್ಕಂದಿನಿಂದ ನೋಡಿತ್ತಾ ಬಂದಿದ್ದರು. ಅವರ ಮುಂದೆ ಆಡಿ ಬೆಳೆದ ಹುಡುಗ ಅನಿರುದ್ಧ್. ಹಾಗಾಗಿ ಆತನ ಪ್ರತಿಭೆಯನ್ನು ಧನುಷ್ ಗುರ್ತಿಸಿ ಕೊನೆಗೆ ಚಿತ್ರರಂಗಕ್ಕೆ ಕರೆತಂದಿದ್ದರು. ಸ್ವತಃ ಐಶ್ವರ್ಯ ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ್ದರು. ಆ ವೀಡಿಯೋ ಈಗ ಸಖತ್ ವೈರಲ್ ಆಗ್ತಿದೆ.

ಧನುಷ್ ನಿರ್ಮಿಸಿ ನಟಿಸಿದ್ದ 'ತ್ರೀ' ಚಿತ್ರಕ್ಕೆ ಐಶ್ವರ್ಯ ರಜನಿಕಾಂತ್ ಆಕ್ಷನ್ ಕಟ್ ಹೇಳಿದ್ದರು. "ಅನಿರುದ್ಧ್‌ಗೆ ಟ್ಯಾಲೆಂಟ್ ಇದೆ. ಆತನನ್ನೇ ನಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಬಳಸಿಕೊಳ್ಳೋಣ ಅಂತ ಹೇಳಿದ್ದು, ಅನಿರುದ್ಧ್ ಚಿತ್ರರಂಗಕ್ಕೆ ಬರಲು ಕಾರಣ ಧನುಷ್.. ಸಿಂಗಾಪುರದಲ್ಲಿ ಮಗನನ್ನು ಓದಿಸಬೇಕು ಅಂತ ಅವ್ರ ಪೋಷಕರು ಅಂದುಕೊಂಡಿದ್ರು.. ಇಲ್ಲ, ನನ್ನ ಮಾತು ಕೇಳಿ, ಅನಿರುದ್ಧ್‌ಗೆ ಬಹಳ ಟ್ಯಾಲೆಂಟ್ ಇದೆ ಎಂದು ಹೇಳಿ ಆತನಿಗೆ ಕೀಬೋರ್ಡ್ ಕೊಡ್ಸಿ, 'ತ್ರೀ' ಚಿತ್ರಕ್ಕೆ ಅವನೇ ಸಂಗೀತ ನಿರ್ದೇಶಕ ಎಂದು ನನ್ನನ್ನು ಒಪ್ಪಿಸಿದ್ದು ಕೂಡ ಧನುಷ್.. ಇವತ್ತು ತನ್ನ ಪರಿಶ್ರಮದಿಂದ ಅನಿರುದ್ಧ್ ಆ ಸ್ಥಾನಕ್ಕೆ ಏರಿದ್ದಾನೆ. ಆದ್ರೆ ಆತ ಚಿತ್ರರಂಗ ಪ್ರವೇಶಿಸಲು ಧನುಷ್ ಕಾರಣ" ಎಂದು ಐಶ್ವರ್ಯ ರಜನಿಕಾಂತ್ ಹೇಳಿದ್ದರು.

ಮತ್ತೊಂದು ವೇದಿಕೆಯಲ್ಲಿ ಧನುಷ್ ಬಗ್ಗೆ ಸ್ವತಃ ಅನಿರುದ್ಧ್ ರವಿಚಂದರ್ ಮಾತನಾಡಿದ್ದರು. ಧನುಷ್ ಅವ್ರು ಇಲ್ಲ ಅಂದ್ರೆ ನಾನು ಇಲ್ಲಿ ಇರುತ್ತಿರಲಿಲ್ಲ, ನನಗಿಂತ ನನ್ನ ಮೇಲೆ ಅವ್ರು ಹೆಚ್ಚು ನಂಬಿಕೆ ಇಟ್ಟವರು. ಇವತ್ತು ನಾನು ಏನೇ ಸಾಧಿಸಿದ್ದರೂ ಅದಕ್ಕೆ ಕಾರಣ ಧನುಷ್ ಸರ್ ಎಂದಿದ್ದರು. 'ತ್ರೀ' ಚಿತ್ರದ 'ಕೊಲವೆರಿ ಡಿ' ಸಾಂಗ್ ಮಾಡಿದ ದಾಖಲೆ ಗೊತ್ತೇಯಿದೆ. ಆ ಬಳಿಕ ಕೂಡ ಧನುಷ್ ನಟಿಸಿದ ಮೂರ್ನಾಲ್ಕು ಚಿತ್ರಗಳಿಗೆ ಅನಿರುದ್ಧ್ ಟ್ಯೂನ್ ಹಾಕಿದ್ದರು.

ನವೆಂಬರ್ 21ರಂದು ಚೆನ್ನೈನಲ್ಲೇ ನಡೆಯುವ ಅನಿರುದ್ಧ್- ಕಾವ್ಯಾ ಮಾರನ್ ಮದುವೆ ರಿಸೆಪ್ಷನ್ ಪಾರ್ಟಿಗೆ ಕಂಡಿತ ಧನುಷ್ ಬಂದು ಹಾರೈಸ್ತಾರೆ ಎನ್ನಲಾಗ್ತಿದೆ. ಧನುಷ್ ಹಾಗೂ ಅನಿರುದ್ಧ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ, ಅದೇ ಕಾರಣಕ್ಕೆ ಮದುವೆಗೆ ಆಹ್ವಾನಿಸಿಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.