ಮೊದಲ ವಾರವೇ ಪ್ರಥಮಾ ಪ್ರಸಾದ್ ಬಿಗ್‌ಬಾಸ್ ಜರ್ನಿ ಮುಗಿಸಿ ಎಲಿಮಿನೇಟ್ ಆಗಿದ್ದರು. ಅದರ ಬೆನ್ನಲ್ಲೇ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ಹೊರ ಬಂದಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣದಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ತೀವ್ರ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮನೆಯಿಂದ ಅವರನ್ನು ಹತ್ತಿರದ ಆರಾಧ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಗ್‌ಬಾಸ್ ಕನ್ನಡ ಶೋನಲ್ಲಿ ಈ ಬಾರಿ ಫ್ಲೈಟ್ ಜರ್ನಿ ಟಾಸ್ಕ್‌ ಇತ್ತು. ಕೆಲ ಸ್ಪರ್ಧಿಗಳು ದೊಡ್ಮನೆ ಒಳಗೆ ಹೋಗದೇ ಫ್ಲೈಟ್‌ನಲ್ಲೇ ಉಳಿಯುವಂತಾಗಿತ್ತು. ಈ ಪಟ್ಟಿಯಲ್ಲಿ ಓಂ ಪ್ರಕಾಶ್ ಸಹ ಇದ್ದರು. ಬಿಗ್‌ಬಾಸ್ ಮನೆಯಲ್ಲಿ ಉಳಿಯಲು ಅವರಿಗೆ ವಯಸ್ಸು ಸಹಕರಿಸುತ್ತಿಲ್ಲ. ಹಾಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅಂತೂ ಇಂತೂ ಒಂದು ವಾರ ಶೋನಲ್ಲಿ ಭಾಗಿ ಆಗಿ ವೀಕ್ಷಕರನ್ನು ರಂಜಿಸಿದ್ದರು. ತಮ್ಮ ನೇರಾ ನೇರಾ ಮಾತುಗಳಿಂದ ಗಮನ ಸೆಳೆದಿದ್ದರು. ಸದ್ಯ ಮತ್ತೆ ಮನೆ ಒಳಗೆ ಹೋಗದಿರಲು ಅವರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಹೀಗೆ ಅನಾರೋಗ್ಯದ ಕಾರಣಕ್ಕೆ ಬಿಗ್‌ಬಾಸ್ ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಕೆಲವರು ಆಸ್ಪತ್ರೆಗೆ ದಾಖಲಾಗಿ ಮರಳಿ ಹೋಗಿರುವುದು, ಅಥವಾ ಬಿಗ್‌ಬಾಸ್ ಜರ್ನಿಯನ್ನೇ ಮುಗಿಸಿರುವ ಉದಾಹರಣಗಳಿವೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಚಿತ್ರರಂಗದಲ್ಲಿ ಅಷ್ಟೇನು ಸಕ್ರಿಯರಾಗಿ ಇರಲಿಲ್ಲ.