ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿಖಿಲ್ ಗೌಡ ವಿರುದ್ಧ ದೂರು ದಾಖಲಾಗಿದೆ. ಅಕ್ಟೋಬರ್ 20ರಂದು ಮೈಸೂರಿನಲ್ಲಿ ನಿಖಿಲ್ ಚಲಾಯಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿತ್ತು. ಈ ವೇಳೆ ದ್ವಿಚಕ್ರ ವಾಹನ ಸವಾರ ಅಭಿಷೇಕ್ ಗಂಭೀರವಾಗಿ ಗಾಯಗೊಂಡಿದ್ದರು. ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದ್ದು ನಿಖಿಲ್ ವಿರುದ್ಧ ದೂರು ದಾಖಲಾಗಿದೆ.

ಅಪಘಾತದ ಬಗ್ಗೆ ಮಾನವೀಯತೆ ದೃಷ್ಟಿಯಿಂದ ನಿಖಿಲ್ ಕಾರಿನಿಂದ ಇಳಿದು ನೋಡದೇ ಎಸ್ಕೇಪ್ ಆಗಿದ್ದರು ಎನ್ನುವ ಆರೋಪ ಕೇಳಿಬಂದಿದೆ. 10 ದಿನಗಳ ಬಳಿಕ ಘಟನೆ ಬಗ್ಗೆ ನಿಖಿಲ್ ವೀಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾರೆ. ಅಂದು ಏನೆಲ್ಲಾ ಆಯ್ತು ಎನ್ನುವ ಬಗ್ಗೆ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಅಪಘಾತ ಆಗಿದ್ದೇ ನನಗೆ ಗೊತ್ತಾಗಲಿಲ್ಲ. ಏನೋ ಸಣ್ಣದಾಗಿ ಟಚ್ ಆದಂತೆ ಭಾಸವಾಯ್ತು. ಏನೂ ಇಲ್ಲ ಅಂದುಕೊಂಡು ನಾನು ಕಾರ್ ನಿಲ್ಲಿಸದೇ ಹೊರಟುಬಿಟ್ಟೆ ಎಂದು ನಿಖಿಲ್ ಹೇಳಿದ್ದಾರೆ.

ಸ್ವಲ್ಪ ಮುಂದೆ ಹೋದ ಬಳಿಕ ಫೋನ್ ಚಾರ್ಜರ್ ಮರೆತ್ತಿದ್ದೆ ಎಂದು ವಾಪಸ್ ಬಂದೆ. ಆಗ ಕೆಲವರು ಗುರ್ತಿಸಿ ನನ್ನ ಕಾರು ನಿಲ್ಲಿಸಿದ್ರು. ಅಪಘಾತವಾಗಿದೆ ಬನ್ನಿ ಆಸ್ಪತ್ರೆಗೆ ಹೋಗೋಣ ಗಾಯಗೊಂಡವರಿಗೆ ಏನಾಯ್ತು ಅಂತ ನೋಡೋಣ ಎಂದು ಇಬ್ಬರು ವ್ಯಕ್ತಿಗಳು ನನ್ನನ್ನು ಆಸ್ಪತ್ರೆ ಬಳಿ ಕರೆದುಕೊಂಡು ಹೋದರು. ಕಾರಿನಲ್ಲೇ ಕುಳಿತಿರಿ ಎಂದು ಹೇಳಿ ಅವರಿಬ್ಬರು ಆಸ್ಪತ್ರೆ ಒಳಗೆ ವಿಚಾರಿಸಿ ಬಂದರು. ಅಪಘಾತದಲ್ಲಿ ವ್ಯಕ್ತಿಗೆ ಗಂಭೀರವಾಗಿ ಪೆಟ್ಟಾಗಿದೆ ಅಂತ ಬಂದು ಹೇಳಿದ್ರು. ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ.

ಅದೇ ದಿನ ಆ ಭಾಗದಲ್ಲಿ ಮತ್ತೊಂದು ಅಪಘಾತವಾಗಿ ಗಾಯಗೊಂಡವರು ಆಸ್ಪತ್ರೆ ಸೇರಿದ್ದರು ಅಂತ ಗೊತ್ತಾಯ್ತು. ಹಾಗಾಗಿ ನಾನು ಗುದ್ದಿದ್ದು ಯಾರಿಗೆ ಎನ್ನುವುದು ಗೊತ್ತಾಗಲಿಲ್ಲ. ಆ ಗೊಂದಲದಲ್ಲಿ ನನ್ನ ಪಾಡಿಗೆ ನಾನು ಇದ್ದೆ. ಮನೆಯಲ್ಲಿ ಈ ವಿಚಾರ ಯಾರಿಗೂ ತಿಳಿಸಿರಲಿಲ್ಲ. ಮನೆಯಲ್ಲಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೆ, ಬೆಂಗಳೂರಿಗೆ ಬಂದೆ. ಕಾರು ಗುದ್ದಿ ನಾನು ಕುಣಿದು ಎಂಜಾಯ್ ಮಾಡ್ತಿದ್ದೀನಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರು. ಮೂರ್ನಾಲ್ಕು ದಿನಗಳ ಬಳಿಕ ಪೊಲೀಸ್ ಠಾಣೆಯಿಂದ ಕರೆ ಬಂತು. ಅಪಘಾತಕ್ಕೊಳಗಾದವರು ದೂರು ನೀಡಿದ್ದರು. ಹಾಗಾಗಿ ವಕೀಲರನ್ನು ನೇಮಿಸಿ ಕಾನೂನಾತ್ಮಕವಾಗಿ ಮುಂದುವರೆಯಬೇಕು ಎಂದು ಸುಮ್ಮನಾದೆ. ಅಷ್ಟರಲ್ಲಿ ಗಾಯಗೊಂಡ ವ್ಯಕ್ತಿ ವೀಡಿಯೋ ಮಾಡಿ ಮಾತನಾಡಿದ್ದಾರೆ ಎಂದು ನಿಖಿಲ್ ತಿಳಿಸಿದ್ದಾರೆ.

ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಅಭಿಷೇಕ್ ನ್ಯೂಸ್ ಫಸ್ಟ್ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. "ಆಯುಧ ಪೂಜೆ ದಿನ ರಾತ್ರಿ 10ಗಂಟೆ ಸುಮಾರಿಗೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಮನೆಗೆ ಹಿಂತಿರುಗುವ ಸಮಯದಲ್ಲಿ ನಿಖಿಲ್ ಕಾರಿನಿಂದ ಗುದ್ದಿ ಹೊರಟು ಹೋದರು. ನನ್ನ ಕಸೀನ್ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರು. ಕೈಗೆ ಗಂಭೀರವಾಗಿ ಪೆಟ್ಟಾಗಿತ್ತು. ಮುಖಕ್ಕೂ ಪೆಟ್ಟಾಗಿ ಸಿಟಿ ಸ್ಕ್ಯಾನ್ ಮುಗಿಸಿ ಬಂದು ಪೊಲೀಸ್ ಠಾಣೆಗೆ ತೆರೆಳಿದ್ವಿ. ಎನ್‌ಸಿಆರ್ ಮಾಡಿಸಿದ್ವಿ" ಎಂದು ಹೇಳಿದ್ದಾರೆ.

ಅದು ನಿಖಿಲ್ ಕಾರು ಎನ್ನುವುದು ನನಗೆ ಮೊದಲೇ ಗೊತ್ತಿತ್ತು. ನಾನು ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡ್ತಿದ್ದೆ. ಹಾಗಾಗಿ ಕಾರಿನ ನಂಬರ್ ನೋಡಿದ ಕೂಡಲೇ ಅದು ಅವರದ್ದೇ ಕಾರ್ ಎಂದು ಗೊತ್ತಿತ್ತು. ಮತ್ತೊಂದು ಕಾರಿನಲ್ಲಿ ಚೇಸ್ ಮಾಡಿಕೊಂಡು ಹೋದವರು ಬಂದು ಅದು ನಿಖಿಲ್ ಕಾರ್, ನಿಖಿಲ್ ಕುಡಿದುಬಿಟ್ಟಿದ್ರು ಎಂದು ಹೇಳಿದ್ರು.. ಕೊನೆಗೆ ಪೊಲೀಸರು ಫೋನ್ ಮಾಡಿದ್ಮೇಲೆ ನಿಖಿಲ್ ಬಂದ್ರು.. ಎಫ್‌ಐಆರ್ ಮಾಡೋದು ಬೇಡ, ನಾನು ಬಂದು ಮಾತಾಡ್ತೀನಿ ಅಂದ್ರು.. ಕೊನೆಗೆ ಎಫ್‌ಐಆರ್ ದಾಖಲಿಸಲಾಯ್ತು.. ಅವತ್ತು ಕೊಂಚ ಕೂಡ ಮಾನವೀಯತೆ ಇರಲಿಲ್ಲ ಎಂದು ಬಹಳ ಬೇಸರವಾಯ್ತು ಎಂದಿದ್ದಾರೆ.