ರಾಕಿಂಗ್ ಸ್ಟಾರ್ ಯಶ್ ಸ್ವಂತ ಪರಿಶ್ರಮದಿಂದ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ಇವತ್ತಿಗೂ ಪ್ರತಿ ಸಿನಿಮಾವನ್ನು ಮೊದಲ ಸಿನಿಮಾ ಎನ್ನುವಂತೆ ಬಹಳ ಶ್ರದ್ಧೆಯಿಂದ ಕೆಲಸ ಮಾಡ್ತಿದ್ದಾರೆ. ಅದಕ್ಕೆ 'ಟಾಕ್ಸಿಕ್' ಉತ್ತಮ ಉದಾಹರಣೆ. ಕೆಲಸದ ಮೇಲಿನ ಅವರ ಶ್ರದ್ಧೆ, ಬದ್ಧತೆ ಬಗ್ಗೆ ಸಾಕಷ್ಟು ಕಲಾವಿದರು, ತಂತ್ರಜ್ಞರು ಮಾತನಾಡಿದ್ದಾರೆ. ಇದೀಗ ನಟಿ ನಯನತಾರಾ ಹೇಳಿಕೆ ಭಾರೀ ವೈರಲ್ ಆಗ್ತಿದೆ.

ಸೌತ್ ಸಿನಿದುನಿಯಾದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ನಯನ್ ಹೆಸರಾಗಿದ್ದಾರೆ. ಸಾಕಷ್ಟು ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಆದರೆ 'ಟಾಕ್ಸಿಕ್' ಚಿತ್ರಕ್ಕಾಗಿ ಯಶ್ ಜೊತೆ ಕೆಲಸ ಮಾಡಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ಇಂತಹ ನಟನನ್ನು ನಾನು ಈವರೆಗೆ ನೋಡಿಲ್ಲ ಎಂದಿದ್ದಾರೆ. ಕವಿನ್ ಹಾಗೂ ನಯನ್ ನಟನೆಯ 'ಹಾಯ್' ಸಿನಿಮಾ ಪ್ರಚಾರದ ವೇಳೆ ರಾಕಿಂಗ್ ಸ್ಟಾರ್ ಹೆಸರು ಬಗ್ಗೆ ಪ್ರಸ್ತಾಪವಾಗಿದೆ.

ಯಶ್ ಅವರನ್ನು ಚಿತ್ರರಂಗದಲ್ಲಿ 'ರಾಕಿ ಭಾಯ್' ಎಂದು ಎಲ್ರೂ ಕರೀತಾರಲ್ಲ. ನಿಜ ಜೀವನದಲ್ಲಿ ಕೂಡ ಅದೇ ರೀತಿ ಅವ್ರು ಇರ್ತಾರೆ. ಇಷ್ಟು ಹಾರ್ಡ್ ವರ್ಕ್ ಮಾಡುವ, ಬೇಕು ಅನ್ನಿಸಿದ್ದನ್ನು ಸಾಧಿಸುವ ಹಠ ಇರುವ, ಅದ್ಭುತ ವಿಷನ್ ಇರುವ ಮತ್ತೊಬ್ಬ ನಟನನ್ನು ನಾನು ನೋಡಿಲ್ಲ. ಅವರಿಗೆ ಕುಟುಂಬ ಹಾಗೂ ಕೆಲಸ ಬಿಟ್ರೆ ಬೇರೆನೂ ಇಲ್ಲ. ಅವ್ರು ಕೆಲಸ ಮಾಡುವುದನ್ನು ನೋಡಿದ್ರೆ ನಮ್ಗೆ ಭಯವಾಗುತ್ತೆ. ಇದನ್ನು ಸುಮ್ನೆ ಹೇಳ್ತಿಲ್ಲ. ನಿಜವಾಗಿ ಹೇಳ್ತೀನಿ. ಅವರಂತೆ ಕೆಲಸ ಮಾಡುವ ನಟ ಮತ್ತೊಬ್ರು ಹುಟ್ಟಿ ಬರ್ಬೇಕು ಅನ್ಸತ್ತೆ. ಇವ್ರ ಬಗ್ಗೆ ಬೇಕಿದ್ರೆ ಇನ್ನು ಎರಡು ಗಂಟೆ ಮಾತನಾಡಬಹುದು, ಅಷ್ಟು ವಿಷಯಗಳಿವೆ ಎಂದು ನಯನತಾರ ಹೇಳಿರುವುದು ವೈರಲ್ ಆಗ್ತಿದೆ.

ನಯನತಾರ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಕಮ್ಮಿ. ಇತ್ತೀಚೆಗೆ ಮತ್ತೆ ಆ ನಿಯಮ ಮೀರಿ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನ ಮಾಡ್ತಿದ್ದಾರೆ. ನಯನ್ ಬೇರೆಯವರನ್ನು ಇಷ್ಟು ಹೊಗಳಿರುವುದು ಇದೇ ಮೊದಲು. ಯಶ್ ಶಿಸ್ತು, ಶ್ರದ್ಧೆ, ಶ್ರಮ ನಿಜಕ್ಕೂ ಎಲ್ಲರಿಗೂ ಮಾದರಿ ಆಗಬೇಕು. 'ಟಾಕ್ಸಿಕ್' ಚಿತ್ರಕ್ಕಾಗಿ ಮೂರ್ನಾಲ್ಕು ವರ್ಷ ಕೆಲಸ ಕೆಲಸ ಮಾಡಿದ್ದಾರೆ. ಬರೀ ನಟನಾಗಿ ಮಾತ್ರವಲ್ಲದೇ ಎಲ್ಲಾ ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮಗೆ ಬೇಕಾದಂತೆ ಸಿನಿಮಾ ಮಾಡಿಕೊಂಡಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸೇರಿ ಚಿತ್ರಕಥೆಯನ್ನು ತಿದ್ದಿ ತೀಡಿದ್ದಾರೆ. ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.

ಹಾಲಿವುಡ್ ವೇದಿಕೆಗೆ ಭಾರತೀಯ ಸಿನಿಮಾಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಅದನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಸಾಗಿದ್ದಾರೆ. 'ಟಾಕ್ಸಿಕ್' ಬಳಿಕ 'ರಾಮಾಯಣ' ಚಿತ್ರದ ಮೂಲಕವೂ ಆ ಪ್ರಯತ್ನ ಮಾಡುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ 'ರಾಮಾಯಣ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾವಣನಾಗಿ ಬಣ್ಣ ಹಚ್ಚಿದ್ದಾರೆ. ಆ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಅಣಿಯಾಗಿದ್ದಾರೆ.

ನಯನತಾರ ಮಾತ್ರವಲ್ಲ ಮೊದಲಿನಿಂದಲೂ ಸಹ ಕಲಾವಿದರು, ಕಲಾವಿದರು, ತಂತ್ರಜ್ಞರು ಕೆಲಸದ ಮೇಲಿನ ಯಶ್ ಅವರ ಆಸಕ್ತಿಯ ಬಗ್ಗೆ ಮಾತನಾಡಿರುವುದನ್ನು ನೋಡಿದ್ದೇವೆ. ಇನ್ನು ಅವರ ಮಹತ್ವಾಕಾಂಕ್ಷೆ ಬಿಡಿಸಿ ಹೇಳುವುದು ಬೇಕಿಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತನಾಡುವಂತಾಗಬೇಕು ಎಂದು ಹೇಳಿದ್ದರು. 'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಅದನ್ನು ಸಾಧಿಸಿದ್ದರು. ಮತ್ತಷ್ಟು ದೊಡ್ಡ ಕನಸುಗಳನ್ನು ಹೊತ್ತು ರಾಕಿಂಗ್ ಸ್ಟಾರ್ ಜರ್ನಿ ಮುಂದುವರೆಸಿದ್ದಾರೆ. ಅವರಿಗೆ ಮತ್ತಷ್ಟು 'ಯಶ'ಸ್ಸು ಸಿಗಲಿ.