ಸಿನಿಮಾ ತಾರೆಯರು ರಾಜಕೀಯರಂಗಕ್ಕೆ ಬರೋದು ಹೊಸದೇನು ಅಲ್ಲ. ಸಿನಿಮಾಗಳಿಂದ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಪಾಲಿಟಿಕ್ಸ್‌ನಲ್ಲೂ ಕಮಾಲ್ ಮಾಡಿದವರು ಇದ್ದಾರೆ. ಎಂಜಿಆರ್, ಎನ್‌ಟಿಆರ್, ಜಯಲಲಿತಾ ಬಳಿಕ ಚಿತ್ರರಂಗದಿಂದ ಬಂದು ವಿಜಯ್ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ವಿಜಯ್ ಬಳಿಕ ಧನುಷ್ ಕೂಡ ರಾಜಕೀಯ ಪಕ್ಷ ಆರಂಭಿಸುತ್ತಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ನಯನತಾರಾ ಕೂಡ ರಾಜಕೀಯರಂಗ ಪ್ರವೇಶ ಮಾಡ್ತಾರಾ ಎನ್ನುವ ಚರ್ಚೆ ಶುರುವಾಗಿದೆ.

ಜಯಲಲಿತಾ ಮಾತ್ರವಲ್ಲ ಹೇಮಾಮಾಲಿನಿ, ಖುಷ್ಬು, ರಾಧಿಕಾ ಶರತ್‌ಕುಮಾರ್, ರಮ್ಯಾ ಹೀಗೆ ಸಾಕಷ್ಟು ಸಿನಿಮಾ ನಟಿಯರು ರಾಜಕೀಯರಂಗದಲ್ಲಿ ಅದೃಷ್ಟಪರೀಕ್ಷೆ ಮಾಡಿಕೊಂಡಿದ್ದಾರೆ. ಶಾಸಕರಾಗಿ ಸಂಸದರಾಗಿ ಆಯ್ಕೆ ಆಗಿರುವವರು ಇದ್ದಾರೆ. ಸದ್ಯ ಬಾಲಿವುಡ್ ನಟಿ ಕಂಗನಾ ರಾಣಾವತ್ ಸಂಸದೆ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದೇ ನಯನತಾರಾ ಜನಪ್ರಿಯತೆ ಸಾಧಿಸಿದ್ದಾರೆ. ಆದರೆ ನನ್ನನ್ನು ಆ ರೀತಿ ಕರೆಯಬೇಡಿ ಎಂದು ಆಕೆ ಮನವಿ ಮಾಡಿರುವುದು ಇದೆ.

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಯನತಾರಾ ನಟಿಸ್ತಿದ್ದಾರೆ. ಇದೆಲ್ಲದರ ನಡುವೆ 2031ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ನಯನ್ ಸ್ಪರ್ಧಿಸ್ತಾರೆ ಎನ್ನುವ ಗುಸಗುಸು ಶುರುವಾಗಿದೆ. ಈ ಬಗ್ಗೆ ಪತಿ ವಿಘ್ನೇಶ್ ಶಿವನ್ ಪ್ರತಿಕ್ರಿಯಿಸಿದ್ದಾರೆ. ಪ್ರಪಂಚ ಆಹಾರ ದಿನೋತ್ಸವ ಅಂಗವಾಗಿ ನಡೆಸಿದ ಅನ್ನದಾನ ಕಾರ್ಯಕ್ರಮದಲ್ಲಿ ನಿರ್ದೇಶಕ ವಿಘ್ನೇಶ್ ಭಾಗಿ ಆಗಿದ್ದರು. ಈ ವೇಳೆ ನಯನತಾರಾ ಪೊಲಿಟಿಕಲ್ ಎಂಟ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಇಲ್ಲ ಎಂದು ವಿಘ್ನೇಶ್ ತಿಳಿಸಿದ್ದಾರೆ.

"ಸದ್ಯ ನಯನತಾರ ಮಕ್ಕಳ ಲಾಲನೆ ಪಾಲನೆಯನ್ನು ಸಂಭ್ರಮಿಸುತ್ತಿದ್ದಾರೆ. ನಮ್ಮ ಆಲೋಚನೆ ಎಲ್ಲವೂ ಮಕ್ಕಳನ್ನು ಬೆಳೆಸುವುದರ ಮೇಲಿದೆ. ಫ್ಯಾಮಿಲಿ, ಕರಿಯರ್ ಅಷ್ಟೇ ಈಗ ನಮ್ಮ ಆದ್ಯತೆ. ಈ ಲೈಫ್ ಬಹಳ ಪ್ರಶಾಂತವಾಗಿದೆ. ಸಂತೃಪ್ತಿ ನೀಡಿದೆ.. ಅಷ್ಟು ಸಾಕು" ಎಂದು ವಿಘ್ನೇಶ್ ಶಿವನ್ ಹೇಳಿದ್ದಾರೆ. ಅಲ್ಲಿಗೆ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.

ಇತ್ತೀಚೆಗೆ ಕನ್ನಡ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಯನತಾರಾ ನಟಿಸಿದ್ದರು. ಸದ್ಯ ಸಲ್ಮಾನ್ ಖಾನ್ ಜೋಡಿಯಾಗಿ ಒಂದು ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ. 'ಮೂಕುಟ್ಟಿ ಅಮ್ಮನ್'- 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಮನ್ನಗಟ್ಟಿ', 'ರಾಕಾಯಿ' ಎಂಬ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.